ನವದೆಹಲಿ, ಜೂ. 16: ನೆರೆಯ ರಾಷ್ಟ್ರ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಹತ್ಯೆ ಹೆಚ್ಚಾಗುತ್ತಿದ್ದು, ಹಿಂದೂಗಳಲ್ಲಿ ವಲಸೆ ಭೀತಿ ಎದುರಾಗಿದೆ. ಈ ಹಿಂದೆಯೂ ಹಿಂದೂಗಳನ್ನು ಬಾಂಗ್ಲಾದಿಂದ ಹೊರಕಳುಹಿಸಲು ಅನೇಕ ರೀತಿಯಲ್ಲಿ ಕಿರುಕುಳ ನೀಡಲಾಗುತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳ ಆಸ್ತಿ ಕಬಳಿಸಿ ಅವರನ್ನು ಹೊರ ಕಳುಹಿಸುವದಕ್ಕಾಗಿ ಬೇರೆಯದ್ದೇ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಸಿಕ್ಕಸಿಕ್ಕಲ್ಲಿ ಹತ್ಯೆ ಮಾಡಲಾಗುತ್ತಿದೆ ಎಂದು ಹಿಂದೂ, ಕ್ರೈಸ್ತ, ಬೌದ್ಧ ಒಕ್ಕೂಟ ಪರಿಷತ್‍ನ ಮುಖ್ಯಸ್ಥ ಕಾಜಲ್ ದೇಬನಾಥ್ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಹಿಂದೂಗಳನ್ನು ಬೆದರಿಸಲು ಹಿಂದೂ ಮಹಿಳೆಯರು, ಹುಡುಗಿಯರ ಮೇಲೆ ಅತ್ಯಾಚಾರ ನಡೆಸಲಾಗುತಿತ್ತು, ಇಲ್ಲವೇ ದೇವಾಲಯ, ಮನೆಗಳ ಮೇಲೆ ಧಾಳಿ ನಡೆಸಿ, ಭಯದ ವಾತಾವರಣ ನಿರ್ಮಿಸಿ ಹಿಂದೂಗಳನ್ನು ಬಾಂಗ್ಲಾದಿಂದ ಹೊರ ಹೋಗುವಂತೆ ಮಾಡಲಾಗುತಿತ್ತು. ಆದರೆ ಈಗ ಯಾವದೇ ಆಸ್ತಿಯನ್ನು ಹೊಂದದ ಬಡ ಹಿಂದೂಗಳನ್ನು ನಿರ್ದಯವಾಗಿ ಹತ್ಯೆ ಮಾಡಲಾಗುತ್ತಿದ್ದು, ಹಿಂದೂಗಳಲ್ಲಿ ವಲಸೆ ಹೋಗುವ ಭೀತಿ ಎದುರಾಗಿದೆ ಎಂದು ದೇಬನಾಥ್ ಹೇಳಿದ್ದಾರೆ.