ಸೋಮವಾರಪೇಟೆ, ಆ.13: ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಯಾವದೇ ಅಹಿತಕರ ಘಟನೆಗಳು ಅಥವಾ ಉಗ್ರಗಾಮಿ ಚಟುವಟಿಕೆಗಳು ನಡೆಯಬಾರದು ಎನ್ನುವ ಉದ್ದೇಶದಲ್ಲಿ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸೂಕ್ತ ಎಚ್ಚರಿಕೆ ವಹಿಸಿದೆ.

ಇತ್ತೀಚೆಗೆ ಮೈಸೂರಿನ ನ್ಯಾಯಾಲಯದ ಆವರಣದಲ್ಲಿ ಬಾಂಬ್ ಸ್ಪೋಟಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೂ ಹೆಚ್ಚಿನ ಭದ್ರತೆಯನ್ನು ಕಲ್ಪಿಸಲಾಗಿದ್ದು, ಶನಿವಾರ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳ ತಾಲೂಕಿನ ಜನನಿಬಿಡ ಪ್ರದೇಶಗಳಲ್ಲಿ ತಪಾಸಣೆ ನಡೆಸಿದೆ. ಕುಶಾಲನಗರ ಬಸ್ಸ್ ನಿಲ್ದಾಣ ಹಾರಂಗಿ ಜಲಾಶಯ, ಕುಶಾಲನಗರ ಮತ್ತು ಸೋಮವಾರಪೇಟೆ ನ್ಯಾಯಾಲಯ ಆವರಣ, ಸೋಮವಾರಪೇಟೆಯ ಖಾಸಗಿ ಬಸ್ ನಿಲ್ದಾಣ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಲ್ದಾಣಗಳಲ್ಲಿ ತಪಾಸಣೆ ನಡೆಸಿದರು.

ಪೊಲೀಸ್ ಉನ್ನತಾಧಿಕಾರಿ ರಾಜೇಂದ್ರ ಪ್ರಸಾದ್ ಮಾರ್ಗದರ್ಶನದಲ್ಲಿ ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಗಂಗಾಧರಯ್ಯ, ಸಿಬ್ಬಂದಿಗಳಾದ ಜಿತೇಂದ್ರ ರೈ, ಲಿಂಗಪ್ಪ, ಸುಕುಮಾರ್, ರವಿ, ರಾಜೇಶ್, ಪ್ರದೀಪ್ ಮತ್ತು ಪೊಲೀಸ್ ಶ್ವಾನ ‘ರ್ಯಾಂಬೋ’ದೊಂದಿಗೆ ತಪಾಸಣೆ ನಡೆಸಿದರು.