ಭಾಗಮಂಡಲ, ನ. 30: ಇಲ್ಲಿಗೆ ಸಮೀಪದ ತಾವೂರು, ತಣ್ಣಿಮಾನಿ, ಕುಂದಚೇರಿ ವ್ಯಾಪ್ತಿಯಲ್ಲಿ ರಾತ್ರಿ ವೇಳೆ ಬಾಗಿಲು ಬಡಿಯುವವನಿಗೆ ಭದ್ರಕಾಳಿ ದೇವಿಯ ಬಲವಿದೆಯಂತೇ.., ಹೀಗೆಂದು ದೇವರೇ ಹೇಳಿದ್ದಾರಂತೆ..!?

ಅಚ್ಚರಿಯೆನಿಸಿದರೂ ಇದೀಗ ಪ್ರಚಲಿತದಲ್ಲಿರೋ ಮಾತು.., ಪ್ರತಿನಿತ್ಯ ರಾತ್ರಿ ವೇಳೆ ಬಾಗಿಲು ಬಡಿಯುವ ಸದ್ದು ಕೇಳಿಸುತ್ತಿದ್ದು, ಗ್ರಾಮಸ್ಥರು, ಪೊಲೀಸರು ಊರಿಡೀ ಹುಡುಕಾಡಿ ದರೂ ಯಾವದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಭಯ-ಬೀತಿಯೊಂದಿಗೆ ದೇವೀ ನಂಬಿಕೆ ಇರುವವರು ಗ್ರಾಮದಲ್ಲಿ ದೇವರು ದರ್ಶನವೀಯು ವವರ ಬಳಿ ತೆರಳಿ ಕೇಳಿಸಿದ್ದಾರಂತೆ.

ದೇವರು ಅವರ ಬಳಿ ‘ಆತ 40 ದಿವಸಗಳವರೆಗೆ ಯಾರಿಗೂ ಸಿಗುವದಿಲ್ಲ. ಆತನಲ್ಲಿ ಭದ್ರಕಾಳಿ ದೇವರ ಶಕ್ತಿ ಇರುವದರಿಂದ ಆತನ ಕಾಲು ಮಾತ್ರ ಕಾಣಸಿಗಲಿದ್ದು, ಮುಖ ಕಾಣಸಿಗಲಾರದು’ಎಂದು ಹೇಳಿದ್ದಾರಂತೆ..!

ಅಪರಿಚಿತರ ಕಾಟದಿಂದ ಬೇಸತ್ತು ಪೊಲೀಸರಿಂದ, ಊರವರಿಂದ ಹುಡುಕಲು ಸಾಧ್ಯವಿಲ್ಲವೆಂದು ತಿಳಿದು ಇದೀಗ ದೇವರೇ ಹುಡುಕಲಿ ಎಂದು ದೇವರ ಬಳಿ ಹೋದವರ ಕತೆಯಿದು.

ಅಂದ ಹಾಗೆ ಬಾಗಿಲು ಬಡಿಯುವ ಹಾವಳಿ ನಿನ್ನೆ ರಾತ್ರಿಯೂ ಮುಂದವರಿದಿದೆ. ತಣ್ಣಿಮಾನಿ ಗ್ರಾಮದ ಮನೆಯೊಂದರ ಬಾಗಿಲು ನಡು ರಾತ್ರಿ ಕಳೆದು 1 ಗಂಟೆಗೆ ಮೂರು ಬಾರಿ ಸದ್ದಾಗಿದೆ. ಅಕ್ಕಪಕ್ಕದವರೆಲ್ಲ ಹುಡುಕಾಡಿದರೂ ಯಾವದೇ ಸುಳಿವು ಸಿಗಲಿಲ್ಲವೆನ್ನಲಾಗಿದೆ.

ಇತ್ತ ಪ್ರತಿನಿತ್ಯ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ದೃಶ್ಯ ಪ್ರತಿನಿತ್ಯದ ಪರಿಪಾಠವಾಗಿದೆ. ಭೀತಿಯನ್ನು ಹೋಗಲಾಡಿಸಿ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ. ತಣ್ಣಿಮಾನಿ ನಿವಾಸಿ, ಗ್ರಾ.ಪಂ. ಸದಸ್ಯ ಭಾಸ್ಕರ್ ಅವರು ಈ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರವನ್ನು ಠಾಣಾಧಿಕಾರಿ ಸದಾಶಿವ ಅವರ ಮೂಲಕ ಸಲ್ಲಿಸಿದ್ದಾರೆ.

ಅಷ್ಟಕ್ಕೂ ಇಲ್ಲಿ ಕಾಡುವ ಪ್ರಶ್ನೆಯೆಂದರೆ ಗ್ರಾಮದಲ್ಲಿ ರಾತ್ರಿ ವೇಳೆ ಅಪರಿಚಿತರು ಸುಳಿದಾಡುವಾಗ ಗ್ರಾಮದಲ್ಲಿರುವ ನಾಯಿಗಳೇಕೆ ಸದ್ದು ಮಾಡುತ್ತಿಲ್ಲ. ಯಾರ ಮನೆಯಲ್ಲೂ ನಾಯಿಗಳಿಲ್ಲವೇ...?

-ಸುನಿಲ್