ಗೋಣಿಕೊಪ್ಪಲು, ಜೂ.21: ಬಾಳುಗೋಡು ಏಕಲವ್ಯ ವಸತಿ ಶಾಲೆ ಆರಂಭವಾಗಿ ಹಲವು ವರ್ಷಗಳೇ ಉರುಳಿದರೂ ಸಮಸ್ಯೆಗಳೂ ಹಾಗೇ ಉಳಿದಿವೆ. ಶುದ್ಧ ನೀರಿನ ಕೊರತೆ, ವಸತಿ ಸಮಸ್ಯೆ, ಅಗತ್ಯ ಶಿಕ್ಷಕರ ಕೊರತೆ, ಅವ್ಯವಸ್ಥೆಯಿಂದ ಕೂಡಿರುವ ವಸತಿ ನಿಲಯ, ದುರಸ್ತಿ ಕಾಣದ ಕೊಠಡಿ, ಶಾಲಾ ಆವರಣದಲ್ಲಿ ಕಾಡು ಬೆಳೆದಿದ್ದು ಸ್ವಚ್ಛತೆಯ ಕೊರತೆ, ಬಾಲಕರ ಶೌಚಾಲಯ ದುರಸ್ತಿಗೊಳಗಾಗಿ ತೊಂದರೆ, ಮಕ್ಕಳ ಸಂಖ್ಯೆ ವಾರ್ಷಿಕವಾಗಿ ಹೆಚ್ಚಳವಾಗುತ್ತಿದ್ದರೂ ಸ್ಥಳದ ಅಭಾವ, ಅಗತ್ಯ ಹಾಸಿಗೆ, ಮಂಚದ ಪೂರೈಕೆ ಇಲ್ಲದೆ ಹೊಂದಾಣಿಕೆಗೆ ಚಡಪಡಿಸುತ್ತಿರುವ ವಾರ್ಡನ್ ಹಾಗೂ ಮುಖ್ಯ ಶಿಕ್ಷಕರು. ಅದೇ ಹಳೆಯ ಹಾಸಿಗೆ, ಟ್ರಂಕ್, ಹೊದಿಕೆ, ಬಣ್ಣ ಕಾಣದ ಕೊಠಡಿ, ಮುರಿದ ಕಿಟಕಿ, ಸ್ನಾನಕ್ಕೆ ಬಿಸಿನೀರು ಇಲ್ಲ ಇವೇ ಇಲ್ಲಗಳ ನಡುವೆ ಈ ಬಾರಿ ಏಕಲವ್ಯ ವಸತಿ ಶಾಲೆ ಎಸ್‍ಎಸ್‍ಎಲ್‍ಸಿಯಲ್ಲಿ ಶೇ.78 ಫಲಿತಾಂಶ ಬಂದಿರುವದು ಹೆಗ್ಗಳಿಕೆ.

ಆದರೆ, ದ್ವಿತೀಯ ಪಿಯುಸಿಯಲ್ಲಿ 6 ಮಕ್ಕಳಲ್ಲಿ ಕೇವಲ 2 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇತ್ತೀಚೆಗೆ ವೀರಾಜಪೇಟೆ ನೂತನ ತಾ.ಪಂ.ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸ್ಮಿತಾ ಪ್ರಕಾಶ್ ಹಾಗೂ ಬಿಟ್ಟಂಗಾಲ ಜಿ.ಪಂ.ಸದಸ್ಯೆ ಅಪ್ಪಂಡೇರಂಡ ಭವ್ಯ ಅವರುಗಳು ದಿಢೀರ್ ಆಗಿ ಏಕಲವ್ಯ ವಸತಿ ಶಾಲೆಗೆ ಭೇಟಿ ನೀಡಿದ ಸಂದರ್ಭ ಹಲವು ಸಮಸ್ಯೆಗಳು ಅಲ್ಲಿ ಕಂಡು ಬಂದವು.

ಏಕಲವ್ಯ ವಸತಿ ಶಾಲೆಯಲ್ಲಿ 6 ರಿಂದ 10ನೇ ತರಗತಿವರೆಗೆ ಹಾಗೂ ಪದವಿ ಪೂರ್ವ ಕಾಲೇಜು ಇದ್ದು ರಾಜ್ಯದ ವಿವಿಧ ಜಿಲ್ಲೆಯ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸೋಮವಾರಪೇಟೆ ತಾಲೂಕಿನ ಶೇ.50 ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವದು ವಿಶೇಷ. ಮೈಸೂರು, ಬೆಂಗಳೂರಿನ ವಿದ್ಯಾರ್ಥಿಗಳೂ ಪ್ರವೇಶ ಪರೀಕ್ಷೆ ಮೂಲಕ ಇಲ್ಲಿಗೆ ಆಯ್ಕೆಗೊಂಡಿರುವದು ವಿಶೇಷ.

ಇಲ್ಲಿನ 6 ರಿಂದ 10ನೇ ತರಗತಿವರೆಗೆ ಒಟ್ಟು 232ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದು, ಪ್ರಥಮ ಪಿಯುಸಿಯಲ್ಲಿ 45 ಹಾಗೂ ದ್ವಿತೀಯ ಪಿಯುಸಿಯಲ್ಲಿ 24 ವಿದ್ಯಾರ್ಥಿಗಳಿದ್ದು ಮತ್ತಷ್ಟು ವಿದ್ಯಾರ್ಥಿಗಳ ಸೇರ್ಪಡೆ ಲಂಗು ಲಗಾಮಿಲ್ಲದೆ ನಡೆಯುತ್ತಿದೆ. ಆದರೆ, ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ವಿಫಲವಾಗಿದೆ. 100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಸತಿ, ಮಂಚ, ಹಾಸಿಗೆ, ಹೊದಿಕೆಯ ಸಮಸ್ಯೆ ಇದೆ.

ಇಲ್ಲಿನ ಬಹುತೇಕ ಕಾಮಗಾರಿಯನ್ನು ಸರ್ಕಾರದ ಏಜೆನ್ಸಿಯಾದ ನಿರ್ಮಿತಿ ಕೇಂದ್ರ ನಿರ್ವಹಿಸುತ್ತಿದೆ. ಆದರೆ, ಇಲ್ಲಿನ ಕೊಠಡಿಗಳು ಸುಣ್ಣ-ಬಣ್ಣ ಕಾಣದೆ ಮಾಸಿದೆ. ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿ ಮುಂದುವರಿದಿದ್ದು ವಸತಿ ನಿಲಯ ದುರಸ್ತಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಕಟ್ಟಡವೊಂದನ್ನು ಸುಣ್ಣ-ಬಣ್ಣದೊಂದಿಗೆ ಬೇಸಿಗೆ ರಜೆಯಲ್ಲಿಯೇ ಮುಗಿಸಬೇಕಿದ್ದರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇಲ್ಲಿನ ವಿದ್ಯಾರ್ಥಿಗಳ ಮಂಚಕ್ಕೂ ಬಣ್ಣ ಬಳಿಯಬೇಕಿದ್ದು ಇದೀಗ ಶಾಲೆ ಆರಂಭಗೊಂಡ ನಂತರ ನಿಧಾನಗತಿಯಲ್ಲಿ ಕಾರ್ಯ ನಡೆಯುತ್ತಿದೆ. ಮಳೆಗಾಲದಲ್ಲಾದರೂ ಬಿಸಿನೀರು ಪೂರೈಕೆ ಅಗತ್ಯವಾಗಿದ್ದು ಇಲ್ಲಿನ ವಿದ್ಯಾರ್ಥಿಗಳು ತಣ್ಣೀರಿನಲ್ಲಿಯೇ ಸ್ನಾನ ಹಾಗೂ ಕುಡಿಯಲು ಬಳಕೆ ಮಾಡಿಕೊಳ್ಳಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.

ಬಾಲಕರ ವಸತಿ ನಿಲಯ ಅವ್ಯವಸ್ಥೆಯಿಂದ ಕೂಡಿದ್ದು, ಶೌಚ ವ್ಯವಸ್ಥೆ ಕೆಟ್ಟು ನಿಂತಿದೆ. ಮೂತ್ರ ವಿಸರ್ಜನೆ ಅಥವಾ ಉದರ ಬಾಧೆ ತೀರಿಸಿಕೊಳ್ಳಲು ದೂರದ ಶಾಲಾ ಆವರಣದಲ್ಲಿರುವ ಶೌಚಾಲಯವನ್ನೇ ಬಹುತೇಕ ಅವಲಂಭಿಸುವಂತಾಗಿದೆ.

ಕಳೆದ ಐದು ವರ್ಷಗಳಿಂದ ನೂತನ ಹಾಸಿಗೆ, ಕಂಬಳಿ ಇಲ್ಲಿ ವಿತರಿಸಿಲ್ಲ. ಎಲ್ಲ ಹಾಸಿಗೆಗಳೂ ರೋಗ ರುಜಿನಕ್ಕೆ ಆಹ್ವಾನ ನೀಡುವಂತಿದೆ. ವಿದ್ಯಾರ್ಥಿಗಳ ಪೆÇೀಷಕರೇ ಹಾಸಿಗೆಯ ಹೊದಿಕೆ ಹಾಗೂ ಮಕ್ಕಳಿಗೆ ಟ್ರಂಕ್ ಪೂರೈಸಿದ್ದು, ಏಜೆನ್ಸಿಗಳು ಈ ಹಿಂದೆ ವಿತರಿಸಿರುವ ಟ್ರಂಕ್ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸದ್ಬಳÀಕೆಯಾಗುತ್ತಿಲ್ಲ. ಭೋಜನ ಶಾಲೆಯಲ್ಲಿ ಒಂದಷ್ಟು ಉತ್ತಮ ಆಹಾರ ಹಾಗೂ ಕುಡಿಯಲು ಬಿಸಿನೀರು ನೀಡಲಾಗುತ್ತಿದೆ.

ಓರ್ವ ವಿದ್ಯಾರ್ಥಿಗೆ ದಿನಕ್ಕೆ ರೂ.33 ರಂತೆ ಸರ್ಕಾರ ಊಟದ ಭತ್ಯೆಯನ್ನು ನೀಡುತ್ತಿದೆ. ಈಗಿನ ಬೆಲೆ ಏರಿಕೆಯಲ್ಲಿ ಇದು ಏನೇನೂ ಸಾಲದು ಎಂಬ ಟೀಕೆಯೂ ವ್ಯಕ್ತವಾಗಿದೆ. ಇಲ್ಲಿನ ಪ.ಪೂ.ಕಾಲೇಜಿನ ಪ್ರಾಂಶುಪಾಲರಾಗಿ ಯೋಗನರಸಿಂಹ ಸ್ವಾಮಿ ಹಾಗೂ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿಯಾಗಿ ಕೆ.ಎಂ.ಭವ್ಯ, ಉಸ್ತುವಾರಿ ಮುಖ್ಯಸ್ಥರಾಗಿ ಕಾವೇರಮ್ಮ ಕಾರ್ಯನಿರ್ವಹಿಸುತ್ತಿದ್ದಾರೆ. ರಾಮದಾಸ್ ನಾಯಕ್ ಲೆಕ್ಕಶಾಸ್ತ್ರ, ರತ್ನಪ್ಪ ಎಂಬ ಶಿಕ್ಷಕರು ಹಿಂದಿ ಪಠ್ಯವಿಷಯವನ್ನು ಬೋಧಿಸುತ್ತಿದ್ದಾರೆ. ಪಿಯುಸಿ ವಿಜ್ಞಾನ ವಿಭಾಗ, ಪ್ರಯೋಗಾಲಯ ವ್ಯವಸ್ಥೆ ಇದ್ದರೂ ಅಗತ್ಯ ಉಪನ್ಯಾಸಕರ ಕೊರತೆ ಕಂಡು ಬಂದಿದೆ. ದೈಹಿಕ ಶಿಕ್ಷಕ ಮಾಯಪ್ಪ.ಡಿ.ಎಂಬವರು ವಿದ್ಯಾರ್ಥಿಗಳಿಗೆ ವ್ಯಾಯಾಮ, ಕ್ರೀಡಾ ತರಬೇತಿಯೊಂದಿಗೆ ಹೆಚ್ಚುವರಿಯಾಗಿ ವಾರ್ಡನ್ ಕಾರ್ಯವನ್ನೂ ನಿರ್ವಹಿಸುತ್ತಿದ್ದಾರೆ.

ಸುರಕ್ಷಾ ಏಜೆನ್ಸಿ ಮೂಲಕ ಶಿಕ್ಷಕರನ್ನು 2011-12 ರಲ್ಲಿ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. ಇದೀಗ ಹಾಸನದಿಂದ ಹೆಚ್ಚುವರಿ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸಲಾಗಿದೆ ಎಂದು ಹೇಳಲಾಗಿದ್ದರೂ, ಯಾವದೇ ಶಿಕ್ಷಕರು ಇನ್ನೂ ವರದಿ ಮಾಡಿಕೊಂಡಿಲ್ಲ. ಪಿಯುಸಿಗೆ 4 ರಿಂದ 6 ಶಿಕ್ಷಕರ ಕೊರತೆ, ಪ್ರೌಢಶಾಲೆಗೆ ಇಂಗ್ಲೀಷ್, ವಿಜ್ಞಾನ ಇತ್ಯಾದಿ ವಿಷಯಗಳಿಗೆ ಶಿಕ್ಷಕರ ಕೊರತೆ ಕಂಡು ಬಂದಿದೆ.

ಶಾಲಾ ಮಕ್ಕಳಿಗೆ ಜೂನ್ ತಿಂಗಳಿನಲ್ಲಿಯೇ ಸಮವಸ್ತ್ರ ಹಾಗೂ ಶೂ, ಸ್ವೆಟರ್ ವಿತರಣೆ ಮಾಡಬೇಕಿದ್ದರೂ ಕ್ರೈಸ್ ಏಜೆನ್ಸಿ ಈ ಬಗ್ಗೆ ತಲೆ ಕೆಡಿಸಿಕೊಂಡಂತಿಲ್ಲ. ಇಡೀ ವಸತಿ ಶಾಲೆಯ ನಿರ್ವಹಣೆಯನ್ನು ಕ್ರೈಸ್ (ಕರ್ನಾಟಕ ರೆಸಿಡೆನ್ಸಿಯಲ್ ಎಜುಕೇಷನ್ ಇನ್ಸ್‍ಟಿಟ್ಯೂಶನ್ ಸೊಸೈಟಿ)ಗೆ ವಹಿಸಲಾಗಿದ್ದರೂ, ಈ ವರ್ಷದ ಸಮವಸ್ತ್ರವನ್ನು ಮುಂದಿನ ವರ್ಷ ಜನವರಿ ಅಥವಾ ಫೆಬ್ರವರಿಯಲ್ಲಿಯೇ ವಿತರಿಸುವ ನಿಧಾನಗತಿಯನ್ನು ಅನುಸರಿಸುತ್ತಾ ಬಂದಿದೆ. ಮಕ್ಕಳ ಆರೋಗ್ಯಕ್ಕೆ ಬೇಕಿರುವ ಸ್ವಚ್ಛತೆ ಇಲ್ಲಿ ಮಾಯವಾಗಿದೆ. ಕೊಳವೆ ಬಾವಿಯ ನೀರನ್ನೇ ಇಲ್ಲಿನ ವಿದ್ಯಾರ್ಥಿಗಳು ಅಧಿಕವಾಗಿ ಬಳಸುತ್ತಿದ್ದು, ಶುದ್ಧ ನೀರಿನ ಘಟಕ ಇಲ್ಲಿ ಸ್ಥಾಪಿಸುವ ಅಗತ್ಯವಿದೆ.

ಸುಮಾರು 13 ಎಕರೆ ನಿವೇಶನದಲ್ಲಿ ಏಕಲವ್ಯ ಮಾದರಿ ವಸತಿ ಶಾಲಾ ಸಮುಚ್ಛಯ ಇಲ್ಲಿದ್ದರೂ ತಾ.ಪಂ.ಅಧ್ಯಕ್ಷೆ ಸ್ಮಿತಾ ಪ್ರಕಾಶ್ ಹಾಗೂ ಜಿ.ಪಂ.ಸದಸ್ಯೆ ಭವ್ಯ ಭೇಟಿ ಸಂದರ್ಭ ಹಲವು ನ್ಯೂನತೆಗಳು ಕಂಡು ಬಂದಿವೆ. ಮುಂದಿನ ದಿನಗಳಲ್ಲಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಪೂರಕ ವ್ಯವಸ್ಥೆಗೆ ಸ್ಪಂದಿಸುವದಾಗಿ ಭರವಸೆ ನೀಡಿದ್ದಾರೆ. ಶಾಸಕರ, ಜಿಲ್ಲಾಡಳಿತದ ಸೂಚನೆಗೆ ಕಿವಿಗೊಡದ ನಿರ್ಮಿತಿ ಕೇಂದ್ರ ಅಧಿಕಾರಿಗಳು ಮಕ್ಕಳ ಭವಿಷ್ಯದೊಂದಿಗೆ ಇಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಉತ್ತಮ ಪ್ರಕೃತಿಯ ಪರಿಸರದಲ್ಲಿ ನೆಲೆ ನಿಂತಿರುವ ಏಕಲವ್ಯ ವಸತಿ ಶಾಲೆಗೆ ಶೀಘ್ರ ಗುತ್ತಿಗೆ ಆಧಾರದಲ್ಲಿಯಾದರೂ ಅತಿಥಿ ಶಿಕ್ಷಕರ ನೇಮಕ, ವಸತಿ ಸಮುಚ್ಛಯ ದುರಸ್ತಿ, ಸಮವಸ್ತ್ರ ವಿತರಣೆ, ನೂತನ ಹಾಸಿಗೆ, ಮಂಚ ವಿತರಣೆಯನ್ನು ಜವಾಬ್ದಾರಿ ಹೊತ್ತಿರುವ ಕ್ರೈಸ್ ಸಂಸ್ಥೆ ಪೂರೈಸಬೇಕಾಗಿದೆ. - ವರದಿ: ಟಿ.ಎಲ್.ಶ್ರೀನಿವಾಸ್