ಮಡಿಕೇರಿ, ಜೂ. 17: ಭಾರತೀಯ ಜನತಾ ಪಕ್ಷದ ನೂತನ ಜಿಲ್ಲಾಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅವರ ಪದಗ್ರಹಣ ಸಮಾರಂಭ ಇಂದು ನಡೆಯಿತು. ಈ ಸಂದರ್ಭ ವೇದಿಕೆಯಲ್ಲಿ ಉಪಸ್ಥಿತರಿದ್ದ ಶಾಸಕತ್ರಯರು ಹಾಗೂ ಮುಖಂಡರು ನೂತನ ಜಿಲ್ಲಾಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.
ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ಮಂಡೇಪಂಡ ಸುಜಾ ಕುಶಾಲಪ್ಪ ಅವರು ಅಧ್ಯಕ್ಷತೆ ವಹಿಸಿ ನೂತನ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಅವರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ಹಸ್ತಾಂತರಿಸಿದರು.
ಗೆಲುವು ಅನಿವಾರ್ಯ: ಸುಜಾ
ಜಿಲ್ಲಾಧ್ಯಕ್ಷ ಸ್ಥಾನದ ಜವಾಬ್ದಾರಿ ಯನ್ನು ಹಸ್ತಾಂತರಿಸಿದ ಬಳಿಕ ಮಾತನಾಡಿದ ನಿಕಟಪೂರ್ವ ಅಧ್ಯಕ್ಷ ಸುಜಾ ಕುಶಾಲಪ್ಪ ಅವರು ಜಿಲ್ಲೆಯಲ್ಲಿ ಶೇ. 70 ರಷ್ಟು ಅಧಿಕಾರ ಬಿ.ಜೆ.ಪಿ.ಯ ಕೈಯಲ್ಲಿದೆ.
ರಾಜ್ಯದಲ್ಲಿ ಬಿ.ಜೆ.ಪಿ. ಆಡಳಿತ ಸಂದರ್ಭ ಜನರ ಯೋಜನೆಗಳನ್ನು ಕೈಗೊಂಡಿತ್ತು. ಶಾಸಕರ ಜನಪರ ಕಾಳಜಿಯಿಂದ ಜಿಲ್ಲೆಯಲ್ಲಿ ಬಿ.ಜೆ.ಪಿ.ಗೆ ಗಟ್ಟಿ ನೆಲೆಯಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಕೇಂದ್ರ ಸರಕಾರ ಕಳಂಕ ರಹಿತವಾಗಿ ಆಡಳಿತ ನೀಡುತ್ತಿದೆ. ಮುಂದಿನ ದಿನಗಳು ಸವಾಲಿನ ದಿನಗಳಾಗಿದ್ದು, ರಾಜ್ಯದಲ್ಲಿ ಬಿ.ಜೆ.ಪಿ. ಆಡಳಿತ ನಿಶ್ಚಿತವಾಗಿದೆ. ಈ ಹಿನ್ನೆಲೆ ಯಲ್ಲಿ ಜಿಲ್ಲೆಯಲ್ಲಿಯೂ ಇಬ್ಬರು ಶಾಸಕರನ್ನು ಗೆಲ್ಲಿಸುವದು ಅನಿವಾರ್ಯವಾಗಿದೆ ಎಂದು ಹೇಳಿದ ಸುಜಾ ಕುಶಾಲಪ್ಪ ಅವರು ಜಿಲ್ಲಾಧ್ಯಕ್ಷರಿಗೆ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.
ಬಿ.ಜೆ.ಪಿ.ಯ ಭದ್ರಕೋಟೆ: ಸುನಿಲ್
ಬಿ.ಜೆ.ಪಿ.ಗೆ ಜಿಲ್ಲೆಯಲ್ಲಿ ಕಠಿಣ ಸವಾಲುಗಳಿತ್ತು. ಜನಪರ ಹೋರಾಟದ ಮೂಲಕ ಜಿಲ್ಲೆ ಬಿ.ಜೆ.ಪಿ. ಯ. ಭದ್ರಕೋಟೆಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಹೇಳಿದರು.
ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುತ್ತದೆ. ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನೂತನ ಅಧ್ಯಕ್ಷರಿಗೆ ಎಲ್ಲರೂ ಸಹಕಾರ ನೀಡುವ ಅಗತ್ಯವಿದೆ. ರಾಜ್ಯ ಸರಕಾರದ ಸಚಿವರು ದೆಹಲಿಯಲ್ಲಿ ಸುತ್ತಾಡುತ್ತಿದ್ದು, ಮೂಲ ಕಾಂಗ್ರೆಸ್ಸಿಗರಲ್ಲಿ ಅಧಿಕಾರವಿಲ್ಲ. ವಲಸೆ ಬಂದವರಲ್ಲಿ ಅಧಿಕಾರ ಕೇಂದ್ರೀಕೃತವಾಗಿದೆ. ಈ ಹಿನ್ನೆಲೆಯಲ್ಲಿ ಯಾವಾಗ ಬೇಕಾದರೂ ಚುನಾವಣೆ ಬರಬಹುದು. ಸಣ್ಣಪುಟ್ಟ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆಗೆ ಸಿದ್ಧರಾಗಬೇಕಾಗಿದೆ ಎಂದು ಹೇಳಿದರು.
ಮುಂದೆ ಹೋರಾಟದ ದಿನಗಳು: ರಂಜನ್
ಜಿಲ್ಲೆಯ ಜನತೆಗೆ ಅನ್ಯಾಯ ವಾದಾಗ ಬಿ.ಜೆ.ಪಿ. ಹೋರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಸವಾಲುಗಳಿದ್ದು, ಮುಂದೆ ಹೋರಾಟದ ದಿನಗಳಿವೆ ಎಂದು ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಸಿದ್ದರಾಮಯ್ಯ ಅವರ ರಾಜ್ಯ ಸರಕಾರ ನಿದ್ರಾ ಸರಕಾರವಾಗಿದ್ದು, ಕಿವಿಕೇಳದ, ಕಣ್ಣು ಕಾಣದ, ನಡೆಯಲು ಸಾಧ್ಯವಾಗದ ಸರಕಾರವಾಗಿದೆ. ಅಕ್ರಮ-ಸಕ್ರಮ ಸಭೆ ಕರೆದಿಲ್ಲ ಎಂದು ಆರೋಪಿಸುವ ಕಾಂಗ್ರೆಸ್‍ನವರು ಜಿಲ್ಲೆಯಲ್ಲಿ 1200 ಹಕ್ಕುಪತ್ರವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಆರೋಪಿಸಿದರು. ಟಿಪ್ಪು ಜಯಂತಿ ಆಚರಿಸುವ ಮೂಲಕ ಜಿಲ್ಲೆಯಲ್ಲಿ ಗಲಭೆಗೆ ರಾಜ್ಯ ಸರಕಾರ ನಾಂದಿ ಹಾಡಿತ್ತು. ಇದೀಗ ಜಿಲ್ಲಾಧಿಕಾರಿ ಹಾಗು ಪೊಲೀಸ್ ವರಿಷ್ಠಾಧಿಕಾರಿ ಗಳನ್ನು ಹೊಣೆ ಮಾಡಲಾಗಿದೆ. ರೈತ ವಿರೋಧಿ ಸರಕಾರವಾಗಿದೆ ಎಂದು ರಂಜನ್ ಆರೋಪಿಸಿದರು.
ಜಿಲ್ಲೆಯಲ್ಲಿ ಪ್ರಭಾವಿ ಸಂಸ್ಥೆಯೊಂದರ ಅಕ್ರಮ ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಆಗ್ರಹಿಸಿದ ಕಾರಣ ಇದೀಗ ದಂಡಕಟ್ಟಿ ಸಕ್ರಮ ಮಾಡಿಕೊಡಲು ರಾಜ್ಯ ಸರಕಾರ ಹವಣಿಸಿದೆ ಎಂದು ಆರೋಪಿಸಿದರು. ಜಿಲ್ಲಾಧ್ಯಕ್ಷರ ವಿರುದ್ಧ ವಾಟ್ಸ್ಯಾಪ್‍ನಲ್ಲಿ ಆರೋಪಗಳು ಕೇಳಿ ಬರುತ್ತಿದ್ದು, ಅವಹೇಳನ ಸರಿಯಲ್ಲ ಎಂದು ಹೇಳಿದರು.
ಸವಾಲು ಸ್ವೀಕಾರ: ಬೋಪಯ್ಯ
ಹಿರಿಯರ ತ್ಯಾಗ, ಪರಿಶ್ರಮ ಹಾಗೂ ಮಾರ್ಗದರ್ಶನದ ಪರಿಣಾಮ ಪಕ್ಷ ನಿರಂತರವಾಗಿದೆ. ಮುಂದಿನ ಸವಾಲನ್ನು ಸ್ವೀಕರಿಸುವ ದೃಢ ಸಂಕಲ್ಪವನ್ನು ಇಂದಿಲ್ಲಿ ತೊಡಬೇಕಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಕರೆ ನೀಡಿದರು. ಬಿ.ಜೆ.ಪಿ. ಕಾರ್ಯಕರ್ತರ ಪಕ್ಷವಾಗಿದೆ. ಕಾರ್ಯ ಕರ್ತರ ಅಪೇಕ್ಷೆಗೆ ಪೂರಕ ವಾಗಿ ಕೆಲಸ ಮಾಡಬೇಕಾಗಿದೆ. ರಾಜ್ಯ ಸರಕಾರದಲ್ಲಿ ಪ್ರಾಮಾಣಿಕರ ಕೊರತೆಯಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಬೋಪಯ್ಯ ಅವರು ರಾಜ್ಯ ಸರಕಾರದ ವಿರುದ್ಧ ಜನಜಾಗೃತಿ ಮೂಡಿಸ ಬೇಕಾಗಿದೆ. ಕೇಂದ್ರ ಸರಕಾರದ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಲಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಪಕ್ಷದಲ್ಲಿ ಎಲ್ಲರಿಗೂ ಸಮಾನ ಅವಕಾಶವಿದೆ. ಸ್ವಾಭಿಮಾನ, ಸ್ವಾವಲಂಭಿಯಾಗಿ ಎಲ್ಲರೂ ಬದುಕಬೇಕು. ಅಧಿಕಾರ ಕೈ ತಪ್ಪಿದರೆ ನಾಯಕರೇ ನೇರ ಕಾರಣರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಪಕ್ಷದ ಕಾರ್ಯಕರ್ತರನ್ನು ಗೊಂದಲಕ್ಕೀಡು ಮಾಡುವ ಯತ್ನ ನಡೆಯುತ್ತಿದೆ. ಯಾರೂ ಅಂತಹ ಗೊಂದಲದ ಮಾತುಗಳಿಗೆ ಕಿವಿಗೊಡಬಾರದು. ಪರಿಸ್ಥಿತಿಯನ್ನು ಎದುರಿಸಬೇಕು. ಬಿ.ಜೆ.ಪಿ.ಗೆ ಜಾತಿ ಇಲ್ಲ. ವ್ಯತ್ಯಾಸಗಳಾಗಿದ್ದಲ್ಲಿ ಸರಿಪಡಿ ಸೋಣ. ಎಲ್ಲಾ ಕಾರ್ಯಕರ್ತರಿಗೂ ಜವಾಬ್ದಾರಿಯಿದೆ ಎಂದು ಹೇಳಿದರು.
ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಮಾತನಾಡಿ, ಮುಂದಿನ ಚುನಾವಣೆಗೆ ಸಿದ್ಧರಾಗೋಣ. ಅಧ್ಯಕ್ಷರಿಗೆ ಸಂಪೂರ್ಣ ಸಹಕಾರ ಇದೆ ಎಂದು ಹೇಳಿ ಶುಭ ಹಾರೈಸಿದರು. ನಿಯೋಜಿತ ಅಧ್ಯಕ್ಷ ಮನು ಮುತ್ತಪ್ಪ ಜವಾಬ್ದಾರಿಯನ್ನು ಸ್ವೀಕರಿಸಿ ಮಾತನಾಡಿ, ಕಾಲೇಜು ವಿದ್ಯಾರ್ಥಿ ಯಾಗಿರುವಾಗಲೇ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಪಕ್ಷ ತನ್ನ ಮೇಲೆ ಭರವಸೆಯಿಟ್ಟು ದೊಡ್ಡ ಜವಾಬ್ದಾರಿ ನೀಡಿದೆ. ಎಲ್ಲರ ಸಹಕಾರದೊಂದಿಗೆ ನಿಭಾಯಿಸು ವದಾಗಿ ತಿಳಿಸಿದರು.
ತಾ.ಪಂ. ಸದಸ್ಯ ನಾಗೇಶ್ ಕುಂದಲ್ಪಾಡಿ ಸ್ವಾಗತಿಸಿ, ಮಡಿಕೇರಿ ತಾಲೂಕು ಅಧ್ಯಕ್ಷ ತಳೂರು ಕಿಶೋರ್ ಕುಮಾರ್ ವಂದಿಸಿದರೆ, ಜಿಲ್ಲಾ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ವಂದಿಸಿದರು.
ವೇದಿಕೆಯಲ್ಲಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಕಾಂತಿ ಸತೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ, ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ವೀರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮೀತಾ, ವೀರಾಜಪೇಟೆ ತಾಲೂಕು ಅಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ಮಡಿಕೇರಿ ನಗರ ಅಧ್ಯಕ್ಷ ಮಹೇಶ್ ಜೈನಿ, ಕಾಫಿ ಸೊಸೈಟಿ ಅಧ್ಯಕ್ಷ ಎಂ.ಬಿ. ದೇವಯ್ಯ, ಮುಖಂಡರಾದ ರಾಬಿನ್ ದೇವಯ್ಯ ಹಾಗೂ ಇನ್ನಿತರರು ಇದ್ದರು.
ಸಮಾರಂಭದಲ್ಲಿ ಜಿಲ್ಲೆಯ ವಿವಿಧೆಡೆಯ ಕಾರ್ಯಕರ್ತರು ಉಪಸ್ಥಿತರಿದ್ದರು.