ಸೋಮವಾರಪೇಟೆ, ಜು. 21: ಭಾರತೀಯ ಜನತಾ ಪಾರ್ಟಿಯು ದೇಶದಲ್ಲಿ ದಲಿತರು ಹಾಗೂ ಹಿಂದುಳಿದವರ ಮೇಲೆ ದೌರ್ಜನ್ಯ ನಡೆಸುತ್ತಾ ದಲಿತ-ಒಬಿಸಿ ಮುಕ್ತ ಭಾರತ ನಿರ್ಮಾಣಕ್ಕೆ ಯತ್ನಿಸುತ್ತಿದೆ ಎಂದು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್ ಆರೋಪಿಸಿದ್ದು, ಈ ಬಗ್ಗೆ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶದ ಬಿಜೆಪಿ ರಾಜ್ಯ ಉಪಾಧ್ಯಕ್ಷ ದಯಾಶಂಕರ್ ಅವರು, ಮಾಜೀ ಮುಖ್ಯಮಂತ್ರಿ ಮಾಯಾವತಿ ಅವರನ್ನು ಅತ್ಯಂತ ಕೀಳುಮಟ್ಟದ ಭಾಷೆಯಲ್ಲಿ ಅವಹೇಳನ ಮಾಡಿರುವದು ಖಂಡನೀಯ. ಅಂತೆಯೇ ಗುಜರಾತ್‍ನಲ್ಲಿ ದಲಿತ ಯುವಕರ ಮೇಲೆ ಮನಸೋಯಿಚ್ಚೆ ಹಲ್ಲೆ ನಡೆಸಿರುವ ಕ್ರಮ ಅಕ್ಷಮ್ಯ. ಈ ಎರಡೂ ಘಟನೆಗಳಿಂದ ಬಿಜೆಪಿಯ ಅಜೆಂಡಾ ಜಗಜ್ಜಾಹೀರಾಗಿದೆ ಎಂದು ಲೋಕೇಶ್ ಹೇಳಿದರು.

ಎರಡೂ ಘಟನೆಗಳು ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ದಲಿತ ಮಹಿಳೆಯ ಮೇಲೆ ಇಂತಹ ಮಾತುಗಳಿಂದ ಧಾಳಿ ನಡೆಸಿರುವ ಪ್ರಕರಣ ಇಡೀ ದೇಶದಲ್ಲೇ ಮೊದಲು. ಬಿಜೆಪಿ ಪಕ್ಷವು ದಲಿತ ಹಾಗೂ ಹಿಂದುಳಿದವರ ವಿರೋಧಿ ಎಂಬದು ಈ ಘಟನೆಗಳಿಂದ ತಿಳಿದುಬರುತ್ತದೆ ಎಂದರು. ಭಾರತೀಯ ಜನತಾ ಪಾರ್ಟಿ ಮಾಯಾವತಿ ಹಾಗೂ ದಲಿತ ಸಮುದಾಯದವರ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಕಾಂಗ್ರೆಸ್ ಪಕ್ಷದಿಂದ ದಲಿತ ಹಾಗೂ ಹಿಂದುಳಿದ ವರ್ಗಗಳ ಘಟಕದ ನೇತೃತ್ವದಲ್ಲಿ ಜಿಲ್ಲಾದ್ಯಂತ ಹೋರಾಟ, ಜನಜಾಗೃತಿ ಧರಣಿ ಹಮ್ಮಿಕೊಳ್ಳಲಾಗುವದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಎ. ಲಾರೆನ್ಸ್, ತಾಲೂಕು ಎಸ್.ಸಿ. ಘಟಕದ ಅಧ್ಯಕ್ಷ ಸುರೇಶ್, ಜಿಲ್ಲಾ ಉಪಾಧ್ಯಕ್ಷ ನಂದಕುಮಾರ್, ತಾ.ಪಂ. ಸದಸ್ಯ ಬಿ.ಬಿ. ಸತೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್, ಮುಖಂಡ ನಾಗರಾಜ್ ಉಪಸ್ಥಿತರಿದ್ದರು.