ಗುಡ್ಡೆಹೊಸೂರು, ಆ. 19: ಇಲ್ಲಿಗೆ ಸಮೀಪದ ಚಿಕ್ಕಬೆಟ್ಟಗೇರಿಯ ಚಂಗಚಂಡ ಗಣೇಶ್ ಅವರ ಗದ್ದೆಯಲ್ಲಿ ಕ್ರೀಡಾಕೂಟ ನಡೆಯಿತು. ಕೊಡಗಿನಲ್ಲಿ ನಾಟಿ ಕಾರ್ಯ ಮುಗಿದ ನಂತರ ನಾಟಿಯಾದ ಗದ್ದೆಯಲ್ಲಿ ಓಟದ ಸ್ಪರ್ಧೆ ಬಹಳ ಹಿಂದಿನ ಕಾಲದಿಂದಲೂ ನಡೆಸಿ ಕೊಂಡು ಬರಲಾಗುತಿತ್ತು. ಆದರೆ ಕ್ರಮೇಣ ಗದ್ದೆ ನಾಟಿ ಮಾಡುವದನ್ನೇ ರೈತರು ಮರೆತಂತಿದೆ.

ಅದಕ್ಕೆ ಹಲವಾರು ಕಾರಣಗಳಿವೆ. ಮುಖ್ಯವಾಗಿ ವಾಣಿಜ್ಯ ಬೆಳೆಗಳ ಕಡೆ ರೈತರು ಮುಖ ಮಾಡಿದ್ದಾರೆ. ಭತ್ತಕ್ಕೆ ಸರಕಾರದವರು ಉತ್ತಮ ಬೆಂಬಲ ಬೆಲೆ ಘೋಷಣೆ ಮಾಡಿದರೆ ಭತ್ತ ಬೆಳೆಯುವ ರೈತರ ಆಸಕ್ತಿ ಹೆಚ್ಚಾಗಬಹುದು. ಕೊಡಗಿನಲ್ಲಿ ಸಾವಿರಾರು ಏಕರೆ ಪ್ರದೇಶದ ಗದ್ದೆಗಳು ಪಾಳುಬಿದ್ದಿವೆ. ಕೆಲವು ಕಡೆ ಕೆಸರು ಗದ್ದೆ ಕ್ರೀಡಾಕೂಟಕ್ಕೋಸ್ಕರ ಗದ್ದೆಗಳನ್ನು ತಯಾರು ಮಾಡಲಾಗುತ್ತಿದೆ. ಆದರೂ ಕೊಡಗಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಟಿ ಕಾರ್ಯ ನಡೆಯುತ್ತಿದೆ

ಗ್ರಾಮೀಣ ಪ್ರದೇಶಗಳಲ್ಲಿ ಕೆಸರು ಗದ್ದೆಯಲ್ಲಿ ನಡೆಯುವ ಈ ಸ್ಪರ್ಧೆಯಿಂದ ನಮ್ಮ ಪುರಾತನ ಕಾಲದ ಆಚಾರ, ಪದ್ಧತಿ, ಸಂಸ್ಕøತಿ ಉಳಿಯುವಂತಾಗಿದೆ. ಒಂದು ವೇಳೆ ಗದ್ದೆ ನಾಟಿ ಕಾರ್ಯವನ್ನು ರೈತರು ಸಂಪೂರ್ಣ ನಿಲ್ಲಿಸಿದ್ದಲ್ಲಿ ಹುತ್ತರಿ ಹಬ್ಬದಲ್ಲಿ ಕದಿರು ತೆಗೆಯಲು ಸಹ ತೊಂದರೆಯಾಗ ಬಹುದು. ಗಣೇಶ್ ಅವರ ಗದ್ದೆಯಲ್ಲಿ ಓಟದ ಸ್ಪರ್ಧೆ ನಡೆಸಲಾಯಿತು. ವಿಜೇತರಿಗೆ ಗ್ರಾಮ ಪಂಚಾಯಿತಿ ಸದಸ್ಯೆ ಪಾರ್ವತಿ ಬಹುಮಾನ ವಿತರಿಸಿದರು. ಈ ಸ್ಪರ್ಧೆಗಳಲ್ಲಿ ಮಹಿಳೆಯರು, ವಯಸ್ಕರು, ಮಕ್ಕಳು ಭಾಗವಹಿಸಿ ಗಮನ ಸೆಳೆದರು. ಗದ್ದೆಯಲ್ಲಿ ನಾಟಿ ಮುಗಿದ ನಂತರ ಗುಂಡು ಹಾರಿಸಿ ಓಟಕ್ಕೆ ಚಾಲನೆ ನೀಡಲಾಯಿತು.

- ಗಣೇಶ್ ಕೊಡೆಕ್ಕಲ್