ಮಡಿಕೇರಿ, ಜ. 5: ಪಿ.ಯು. ಕಾಲೇಜುಗಳ ಪ್ರಾಂಶುಪಾಲರು ಹಾಗೂ ಉಪನ್ಯಾಸಕರುಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು.

ಕಳೆದ ಏಪ್ರಿಲ್‍ನಲ್ಲಿ ಸಂಘ ಮೌಲ್ಯಮಾಪನ ಬಹಿಷ್ಕರಿಸಿ ನಡೆಸಿದ ಅನಿರ್ದಿಷ್ಟಾವದಿ ಮುಷ್ಕರದ ಸಂದರ್ಭ ಸಕಾರಾತ್ಮಕವಾಗಿ ಸ್ಪಂದಿಸಿ ವೇತನ ತಾರತಮ್ಯಕ್ಕೆ ಸಂಬಂಧಪಟ್ಟಂತೆ ಒಂದು ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡಿ ಉಳಿದ ಬೇಡಿಕೆಗಳ ಬಗ್ಗೆ ಸ್ಪಂದಿಸುವದಾಗಿ ಭರವಸೆ ನೀಡಲಾಗಿತ್ತು. ಆದರೆ ಇದುವರೆಗೂ ಸಂಘದ ಪದಾಧಿಕಾರಿಗಳನ್ನು ಸರಕಾರ ಚರ್ಚೆಗೆ ಆಹ್ವಾನಿಸಿಲ್ಲ. ಸಂಘ ಅನೇಕ ಬಾರಿ ಶಿಕ್ಷಣ ಸಚಿವರನ್ನು ಸಂಪರ್ಕಿ ಸಿದಾಗ ಇನ್ನೊಂದು ವಾರ್ಷಿಕ ಬಡ್ತಿಯನ್ನು ನೀಡುವದಾಗಿ ಈ ಸಂಬಂಧ ಚರ್ಚೆಗೆ ಆಹ್ವಾನಿಸುವದಾಗಿ ಭರವಸೆ ನೀಡಿದ್ದರು. ಆದರೆ ಯಾವದೇ ಸಭೆ ನಡೆದಿಲ್ಲ.

ಉಪನ್ಯಾಸಕರ ವೇತನ ತಾರತಮ್ಯ ಬಗೆಹರಿಸಲು 2ನೇ ವರ್ಷದ ವಾರ್ಷಿಕ ಬಡ್ತಿಯನ್ನು ತಕ್ಷಣ ಮಂಜೂರು ಮಾಡುವದು. ಪದವಿಪೂರ್ವ ಶಿಕ್ಷಣ ಇಲಾಖೆಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ವಿಲೀನಗೊಳಿಸುವದಕ್ಕೆ ಸಂಬಂಧಿಸಿ ದಂತೆ ಸಂಘದ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚರ್ಚಿಸಿ ಅನುಷ್ಠಾನಗೊಳಿಸುವದು. 2013 ರಲ್ಲಿ ನೇಮಕಗೊಂಡ ಉಪನ್ಯಾಸಕರಿಗೆ ವೇತನ ಸಹಿತವಾಗಿ ಬಿ.ಇಡಿ, ವ್ಯಾಸಂಗಕ್ಕೆ ನಿಯೋಜನೆ ಮಾಡುವದು ಮತ್ತು ಈಗಾಗಲೇ ಬಿ.ಇಡಿ., ಪದವಿ ಹೊಂದಿರುವವರ ಖಾಯಂ ಪೂರ್ವ ಸೇವಾವಧಿಯನ್ನು ತೃಪ್ತಿಕರವೆಂದು ಘೋಷಿಸುವದು. ಗುತ್ತಿಗೆ ಆಧಾರದ ಉಪನ್ಯಾಸಕರ ಕಾಲ್ಪನಿಕ ವೇತನ ಬಡ್ತಿಯ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವದು. ಅನುದಾನಿತ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯ ಕಾಲ್ಪನಿಕ ವೇತನ ಬಡ್ತಿಯ ಸಮಸ್ಯೆಯನ್ನು ಅಗತ್ಯ ಹಣಕಾಸನ್ನು ಒದಗಿಸುವದರ ಮೂಲಕ ಪರಿಹರಿಸುವದು. ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಸರಕಾರಿ ನೌಕರರಿಗೆ ಒದಗಿಸಿರುವ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸುವದು. ಕುಮಾರ ನಾಯಕ್ ಸಮಿತಿಯ ವರದಿಯನ್ವಯ ಅರೆಕಾಲಿಕ ಉಪನ್ಯಾಸಕರ ಸೇವೆಯನ್ನು 5 ವರ್ಷಗಳ ಮಿತಿಯೊಂದಿಗೆ ಪಿಂಚಣಿ ಮತ್ತು ಇತರೆ ಸೌಲಭ್ಯಗಳಿಗೆ ವಿಸ್ತರಿಸುವದು. ವರದಿಯನ್ವಯ ಎಂ.ಫಿಲ್, ಪಿಹೆಚ್‍ಡಿ, ಪದವಿ ಹೊಂದಿದ ಉಪನ್ಯಾಸಕರಿಗೆ ವಿಶೇಷ ವಾರ್ಷಿಕ ಬಡ್ತಿಯನ್ನು ಮಂಜೂರು ಮಾಡುವದು. ಎನ್.ಇ.ಟಿ., ಎಸ್.ಇ.ಟಿ., ಪಿಹೆಚ್‍ಡಿ, ಪದವಿ ಹೊಂದಿದ ಉಪನ್ಯಾಸಕರನ್ನು ಪದವಿ ಕಾಲೇಜುಗಳಿಗೆ ಬಡ್ತಿ ನೀಡುವದು.

ರಾಜ್ಯದ ಸರಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹುದ್ದೆಗಳಿಗೆ ತಕ್ಷಣ ಉಪನ್ಯಾಸಕರನ್ನು ಬಡ್ತಿ ಅಥವಾ ನೇರ ನೇಮಕಾತಿ ಮೂಲಕ ತುಂಬುವದು ಸೇರಿದಂತೆ ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸುವಂತೆ ಸಂಘ ಮನವಿಯಲ್ಲಿ ಆಗ್ರಹಿಸಿದೆ. ಆದರೆ ಸರಕಾರದ ನಿರ್ಲಕ್ಷ್ಯ ಧೋರಣೆಯನ್ನು ಅನುಸರಿಸಿದಲ್ಲಿ ಸಂಘ ಅನಿವಾರ್ಯ ವಾಗಿ ಹೋರಾಟ ಹಮ್ಮಿಕೊಳ್ಳ ಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.

ಈ ಸಂದರ್ಭ ಕೊಡಗು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಸಿ.ಎನ್. ವಿಶ್ವನಾಥ್, ಕಾರ್ಯದರ್ಶಿ ಫಿಲಿಪ್ ವಾಸ್, ನಾಗರಾಜ್ ಮತ್ತು ಆಳ್ವರಿಸ್, ಮಹದೇವ್, ನಾಗಪ್ಪ ಉಪಸ್ಥಿತರಿದ್ದರು.