ಭಾಗಮಂಡಲ, ಅ. 16: ಕೊಡಗಿನ ಕುಲಮಾತೆ ಕನ್ನಡ ನಾಡಿನ ಜೀವನದಿ ಮಾತೆ ಶ್ರೀ ಕಾವೇರಿ ತಾ. 17 ರಂದು (ಇಂದು) ಮುಂಜಾನೆ ತೀರ್ಥರೂಪಿಣಿಯಾಗಿ ಉದ್ಭವಿಸು ವದರೊಂದಿಗೆ ಭಕ್ತರಿಗೆ ಒಲಿಯಲಿದ್ದಾಳೆ. ತಾ. 17ರ ಬೆಳಿಗ್ಗೆ 6.29ಕ್ಕೆ ತುಲಾಲಗ್ನದ ಶುಭ ಮುಹೂರ್ತದಲ್ಲಿ ಈ ಬಾರಿಯ ಪವಿತ್ರ ತೀರ್ಥೋದ್ಭವ ಘಟಿಸಲಿದ್ದು, ಭಕ್ತಾದಿಗಳು ಕಾತರದಿಂದಿದ್ದಾರೆ ಕಾವೇರಿ ಕ್ಷೇತ್ರದಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ.

ಪವಿತ್ರ ತೀರ್ಥೋದ್ಭವ ಈ ಬಾರಿ ಮುಂಜಾನೆ 6.29ಕ್ಕೆ ನಡೆಯಲಿರುವದರಿಂದ ದಿನವಿಡೀ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಭಾಗಮಂಡಲ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸಕಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಮುಂಜಾಗರೂಕತಾ ಕ್ರಮ ಕೈಗೊಂಡಿದೆ.

ಮಾತೆ ಕಾವೇರಿಯನ್ನು ಬರಮಾಡಿಕೊಳ್ಳಲು ಅರ್ಚಕವೃಂದ ಅಗತ್ಯ ಪೂಜಾ ವಿಧಿ - ವಿಧಾನ ನೆರವೇರಿಸಲು ಸಜ್ಜಾಗಿದೆ. ಕೊಡಗು ಏಕೀಕರಣ ರಂಗ, ಕೈಲಾಶಾಶ್ರಮ, ಮಂಡ್ಯ ಅನ್ನಸಂತರ್ಪನಾ ಸಮಿತಿಯಿಂದ ಅನ್ನದಾನದ ವ್ಯವಸ್ಥೆಗೆ ಸಿದ್ಧತೆ ನಡೆದಿದೆ. ಕೊಡಗು ಏಕೀಕರಣರಂಗದಿಂದ ಇಂದು ಮಧ್ಯಾಹ್ನದಿಂದಲೇ ಅನ್ನ ಸಂತರ್ಪಣೆ ಆರಂಭಿಸಲಾಗಿದೆ. ಭಾಗಮಂಡಲ- ತಲಕಾವೇರಿ ಸನ್ನಿಧಿ ವಿದ್ಯುತ್ ದೀಪಾಲಂಕಾರಗೊಂಡಿದ್ದು, ಹೂವಿನಾಲಂಕಾರವನ್ನು ಮಾಡಲಾಗಿದೆ.. ಇಲ್ಲಿಂದ ತಲಕಾವೇರಿ ತನಕವೂ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

ಕೆ.ಎಸ್.ಆರ್.ಟಿ.ಸಿ. ಬಸ್ ವ್ಯವಸ್ಥೆ

ರಾಜ್ಯ ರಸ್ತೆ ಸಾರಿಗೆ ನಿಗಮದಿಂದ 30 ವಿಶೇಷ ಬಸ್‍ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ತಾ. 16ರ ಅಪರಾಹ್ನದಿಂದಲೇ ಕಾರ್ಯಾಚರಿಸುತ್ತಿದೆ. ಮಡಿಕೇರಿಯಿಂದ ಭಾಗಮಂಡಲಕ್ಕೆ 20 ಬಸ್ ಹಾಗೂ ಭಾಗಮಂಡಲದಿಂದ ತಲಕಾವೇರಿ ತನಕ 10 ಬಸ್ ಓಡಾಟ ನಡೆಸಲಿವೆ. ಅಗತ್ಯತೆಗಳನ್ನು ಗಮನಿಸಿ ಬದಲಾವಣೆ ಮಾಡಿಕೊಳ್ಳಲಾಗುವದು ಎಂದು ಮಡಿಕೇರಿ ಡಿಪೋ ವ್ಯವಸ್ಥಾಪಕಿ ಗೀತಾ ತಿಳಿಸಿದ್ದಾರೆ.

ಸಿಸಿ ಟಿವಿ, ಕ್ಯಾಮೆರಾ, ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆ ನಿಯೋಜಿಸಿದೆ. ಕೇಶಮುಂಡನ, ಪಿಂಡ ಪ್ರಧಾನಕ್ಕೆ ಅವಕಾಶ, ಶೌಚಾಲಯ ವ್ಯವಸ್ಥೆ, ಸ್ವಯಂ ಸೇವಕರ ನಿಯೋಜನೆಯನ್ನೂ ಮಾಡಲಾಗಿದ್ದು, ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಸಾಹಿತ್ಯ ಅಕಾಡೆಮಿಯಿಂದ ಭಕ್ತಿ ಸಂಗೀತ ಮೂಡಿ ಬರಲಿದೆ.

ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ಇಂದು ಸ್ಥಳಕ್ಕೆ ಆಗಮಿಸಿ, ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು. ತಲಕಾವೇರಿ- ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಆಡಳಿತಾಧಿಕಾರಿಯಾಗಿರುವ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಅವರು ವ್ಯವಸ್ಥೆಗಳ ಬಗ್ಗೆ ಗಮನ ಹರಿಸಿದ್ದರು. -ಸುನಿಲ್