ಮಡಿಕೇರಿ, ಸೆ. 24: ಜಿಲ್ಲೆಯ ಭತ್ತದ ಕೃಷಿ, ಕರಿಮೆಣಸು ಹಾಗೂ ಕಾಫಿ ಬೆಳೆಯನ್ನು ಪ್ರೋತ್ಸಾಹಿಸಿ ಸಹಾಯ ಧನವನ್ನು ಒದಗಿಸಿ ಕೊಡುವಂತೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ರಾಜ್ಯ ಸರಕಾರದ ಮುಖ್ಯಮಂತ್ರಿಗಳು, ಕಂದಾಯ ಸಚಿವರು, ಕೃಷಿ ಮಾರುಕಟ್ಟೆ ಮತ್ತು ತೋಟಗಾರಿಕಾ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಲಾಯಿತು. ಅಧ್ಯಕ್ಷ ಮನು ಮುತ್ತಪ್ಪ ಅವರು ಈ ಕುರಿತು ಮನವಿ ಮಾಡಿದ್ದಾರೆ.

ನೈಸರ್ಗಿಕವಾಗಿ ನೀರು ಇಂಗಿಸುವ ಭತ್ತದ ಕೃಷಿಯಿಂದಾಗಿ ಅಂತರ್ಜಲ ಅಭಿವೃದ್ಧಿ ಕಾಲಕಾಲದ ಮಳೆ ಬೆಳೆಗೆ ಕಾರಣವಾಗಿದೆ. ಈ ಪ್ರಕ್ರಿಯೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಭತ್ತದ ಕೃಷಿ ಮಾಡುವವರಿಗೆ ಬೆಂಬಲ ಬೆಲೆ ಹಾಗೂ ಸಹಾಯ ಧನಗಳನ್ನು ಒದಗಿಸಿದಲ್ಲಿ ಬಂಜರು ಭೂಮಿಯೂ ಕೃಷಿಯಾಗುವದಲ್ಲದೆ ರೈತರು ಹಾಗೂ ಸಹಕಾರಿಗಳ ವಲಸೆ ಪ್ರಮಾಣವು ಕಡಿಮೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಭತ್ತದ ಕೃಷಿಗೆ ಬೆಂಬಲ ಬೆಲೆ ಮತ್ತು ಸಹಾಯ ಧನಗಳನ್ನು ಒದಗಿಸಲು ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಅಲ್ಲದೆ ದೇಶದ ಕರಿಮೆಣಸು ಉತ್ಪಾದನೆಯಲ್ಲಿ ಕರ್ನಾಟಕವು ಶೇ. 70 ರಷ್ಟು ಬೆಳೆಯುತ್ತಿದೆ. ಕೊಡಗು ಸಿಂಹ ಪಾಲನ್ನೇ ತನ್ನ ಕೊಡುಗೆಯಾಗಿ ನೀಡಿದೆ. ಕೊಡಗಿನ ಎಲ್ಲಾ ಕಾಫಿ ತೋಟಗಳಲ್ಲಿ ಕರಿಮೆಣಸನ್ನು ಸಾಂಪ್ರದಾಯಿಕವಾಗಿ ಮತ್ತು ಉಪಬೆಳೆಯಾಗಿ ಬೆಳೆಸುವ ಕಾರಣ ಪಹಣಿ ಪತ್ರ (ಆರ್‍ಟಿಸಿ)ದಲ್ಲಿ ಕರಿಮೆಣಸನ್ನು ಶಾಶ್ವತ ಬೆಳೆಯಾಗಿ ನಮೂದಿಸದೇ ಆದಲ್ಲಿ ಕೊಡಗಿನ ಬೆಳೆಗಾರರಿಗೆ ಕೇಂದ್ರ ಸಂಬಾರ ಮಂಡಳಿ ಮೂಲಕ ಸೌಲಭ್ಯಗಳು ದೊರೆಯಲು ಅವಕಾಶವಾಗುತ್ತದೆ.

ಈ ನಿಟ್ಟಿನಲ್ಲಿ ಸಂಬಂಧಿಸಿದ ತಂತ್ರಾಂಶವನ್ನು ಕೂಡಲೇ ಅಭಿವೃದ್ಧಿಪಡಿಸಿ ಕರಿಮೆಣಸನ್ನು ದೀರ್ಘಾವಧಿ ಬೆಳೆಯಾಗಿ ಮಾರ್ಪಾಡಾಗುವಂತೆ ಪಹಣಿ ಪತ್ರದಲ್ಲಿ ನಮೂದಿಸುವಂತೆ ಕೂಡಲೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು.

ಕಾಫಿ ಮಂಡಳಿಯ ಹೊಸ ನಿಯಮದಂತೆ ಬೆಳೆಗಾರರ ನೋಂದಣಿ ಮತ್ತು ಕಾಫಿ ಬೆಳೆಗಾರರನ್ನು ಅಧ್ಯಕ್ಷರನ್ನಾಗಿ ಮಾಡುವ ತೀರ್ಮಾನವು ಸ್ವಾಗತಾರ್ಹವಾಗಿದೆ. ಇದರಲ್ಲಿ ಅಧ್ಯಕ್ಷರ ಅಧಿಕಾರ ಮತ್ತು ಕರ್ತವ್ಯದ ಬಗ್ಗೆ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಅಧ್ಯಕ್ಷರಿಗೆ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳುವ ಅಧಿಕಾರ ಅಗತ್ಯ.

ಈ ಹಿಂದೆ ಕಾಫಿ ಮಂಡಳಿಯಲ್ಲಿ 33 ಸದಸ್ಯರಿದ್ದು, ಅದರಲ್ಲಿ 10 ಸ್ಥಾನ ಕಾಫಿ ಬೆಳೆಗಾರರಿಗೆ ಕಲ್ಪಿಸಲಾಗಿತ್ತು. ಇದನ್ನು ಬೆಳೆಗಾರರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ವಿಶೇಷ ಆಸಕ್ತಿ ವಹಿಸಿ ಮಂಡಳಿಗೆ ಬೆಳೆಗಾರರ ವತಿಯಿಂದ 12 ಜನರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳುವದು ಸೇರಿದಂತೆ ಕಾಫಿ ಮಂಡಳಿ ಅಧಿಕಾರಿಗಳು ಬೆಳೆಗಾರರ ತೋಟಗಳಿಗೆ ಪೂರ್ವಾನುಮತಿ ಇಲ್ಲದೆ ಪ್ರವೇಶಿಸಿ ಪರಿಶೀಲಿಸಲು ಅಧಿಕಾರ ನೀಡುವದನ್ನು ಕೈಬಿಡುವಂತೆ ಮನವಿಯಲ್ಲಿ ಕೋರಲಾಗಿದೆ.