ಸೋಮವಾರಪೇಟೆ, ನ. 25: ರಾಸಾಯನಿಕ ಬಳಕೆಯಿಂದಾಗಿ ಜೀವನವೇ ದುಸ್ತರವಾಗುತ್ತಿದೆ. ಸಾವಯವ ಕೃಷಿಯಿಂದ ಮಾತ್ರ ಮಣ್ಣಿಗೆ ಜೀವ. ಸಾವಯವ ಕೃಷಿಯ ಮೂಲಾಧಾರವಾದ ಗೋವಿನಲ್ಲಿ 33 ಕೋಟಿ ದೇವಾನು ದೇವತೆಗಳು ನೆಲೆಸಿದ್ದಾರೆ ಎಂದು ಇಲ್ಲಿನ ವಿರಕ್ತ ಮಠದ ಮಠಾಧೀಶರಾದ ವಿಶ್ವೇಶ್ವರ ಸ್ವಾಮೀಜಿ ಹೇಳಿದರು. ಶ್ರೀ ರಾಮಚಂದ್ರಾಪುರ ಮಠದ ಆಶ್ರಯದಲ್ಲಿ ನಡೆಯುತ್ತಿರುವ ವಿಶ್ವ ಮಂಗಲ ಗೋ ಯಾತ್ರೆ ಪಟ್ಟಣಕ್ಕೆ ಆಗಮಿಸಿದ ಸಂದರ್ಭ ಇಲ್ಲಿನ ಮುತ್ತಪ್ಪ ಹಾಗೂ ಅಯ್ಯಪ್ಪ ದೇವಾಲಯದ ಬಳಿ ಸ್ವಾಗತ ಕೋರಿ ಅವರು ಮಾತನಾಡಿದರು. ಭೂಮಿಯಲ್ಲಿ ಗೋವುಗಳು ನಶಿಸಿದರೆ ಭೂಮಿ ಬರಡಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಗೋ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು. ಇಲ್ಲಿನ ಕಕ್ಕೆಹೊಳೆ ಜಂಕ್ಷನ್ ಬಳಿಯಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ತೆರಳಿದ ಗೋ ಯಾತ್ರೆ ರಥ ಶನಿವಾರಸಂತೆ ಕಡೆಗೆ ಪ್ರಯಾಣ ಬೆಳೆಸಿತು. ಈ ಸಂದರ್ಭ ಪ್ರಮುಖರು ಗಳಾದ ಬನ್ನಳ್ಳಿ ಗೋಪಾಲ್, ಸೋಮೇಶ್, ಮನುಕುಮಾರ್ ರೈ, ಪ್ರಮೋದ್, ರಮೇಶ್, ಜಯಣ್ಣ, ಬಿ.ಪಿ. ಶಿವಕುಮಾರ್, ಶರತ್‍ಚಂದ್ರ ಸೇರಿದಂತೆ ಇತರರು ಭಾಗವಹಿಸಿದ್ದರು.