ಮಡಿಕೇರಿ, ಸೆ. 6: ಕಾವೇರಿ ಮಾತೆ ಮತ್ತೆ ಕತ್ತಲೆಯ ಕೂಪದಲ್ಲಿ ಪೂಜಿಸಲ್ಪಡುತ್ತಿದ್ದಾಳೆ. ಈ ಹಿಂದೆ ಅಷ್ಟಮಂಗಲದಲ್ಲಿ ದೊರೆತ ಜ್ಯೋತಿಶ್ಶಾಸ್ತ್ರ ಮಾರ್ಗಾನುಸಾರ ಹಾಗೂ ಹಿಂದೂ ಧಾರ್ಮಿಕ ಮಾರ್ಗದರ್ಶನದಂತೆ ಕಾವೇರಿಯ ಮೂಲ ಉದ್ಭವ ಸ್ಥಾನದಲ್ಲಿ ಪವಿತ್ರ ಕುಂಡಿಕೆಗೆ ಸೂರ್ಯನ ರಶ್ಮಿ ಸ್ಪರ್ಶಗೊಳ್ಳಬೇಕು. ಆಗ ಮಾತ್ರ ಅಲ್ಲಿ ದೈವಿಕ ಸಂಚಲನÀವುಂಟಾಗುತ್ತದೆ. ಯಾವದೇ ದೈವಿಕ ಮಹತ್ವವುಳ್ಳ ಪುಣ್ಯ ಕ್ಷೇತ್ರಗಳಲ್ಲಿ ಗರ್ಭಗುಡಿಯ ಮೇಲೆ ಕಲಶವನ್ನು ಸ್ಥಾಪಿಸುವದು ಅತ್ಯಗತ್ಯ. ಆ ಕಲಶಕ್ಕೆ ಬೀಳುವ ಸೂರ್ಯರಶ್ಮಿ ಕೆಳಭಾಗದಲ್ಲಿ ಗರ್ಭಗುಡಿಯಲ್ಲಿರುವ ವಿಗ್ರಹಗಳಿಗೆ ಪ್ರತಿಫಲಿತಗೊಂಡಾಗ ಮಾತ್ರ ಪ್ರತಿಷ್ಠಾಪಿತ ಅಥವ ಉದ್ಭವ ಶಿಲಾ ವಿಗ್ರಹಗಳಲ್ಲಿ ಜೀವ ಚೈತನ್ಯ ಮೂಡುತ್ತದೆ. ಆ ಮೂಲಕ ಭಕ್ತಾದಿಗಳು ನಂಬಿ ಪ್ರಾರ್ಥಿಸುವ ಶಿಲಾ ಮೂರ್ತಿಗಳಲ್ಲಿನ ಚೈತನ್ಯ ಅವರನ್ನು ರಕ್ಷಿಸುತ್ತದೆ ಎಂಬದು ಧರ್ಮಶಾಸ್ತ್ರ ಗ್ರಂಥಗಳಲ್ಲಿ ಕಂಡು ಬರುವ ನಿಖರ ಮಾಹಿತಿಯಾಗಿದೆ.
ತಲಕಾವೇರಿಯಲ್ಲಿ ಉದ್ಭವಿಸಿರುವ ಮಾತೆ ಕಾವೇರಿ ಪುರಾಣ ಕಾಲದಿಂದಲೂ ಧಾರ್ಮಿಕ ಉದ್ಗ್ರಂಥಗಳಲ್ಲಿ, ವೇದ ಮಂತ್ರಗಳ ಉಲ್ಲೇಖದಲ್ಲಿ “ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು” ಎಂಬ ಪ್ರಾರ್ಥನೆಯಂತೆ ಭಾರತದ ಪವಿತ್ರ ಸಪ್ತ ನದಿಗಳಲ್ಲಿ ಕಾವೇರಿಯೂ ಒಂದಾಗಿದ್ದಾಳೆ. ಈಕೆಯ ಮೂಲ ಸ್ಥಾನದ ಕುಂಡಿಕೆಯ ಮೇಲ್ಭಾಗ ಅರ್ಚನೆಗೆ ಮಳೆ
ಬೀಳದಂತೆ ಕವಚವಾಗಿ ಪ್ರಸಕ್ತ ವರ್ಷ ಟಾರ್ಪಲ್ ಹೊದಿಸಲಾಗಿದೆ. ಇದರಿಂದಾಗಿ ಕಾವೇರಿಗೆ ಕರಿ ಛಾಯೆಯ ಆವರಣವುಂಟಾಗಿ ಕತ್ತಲೆಯ ಕೂಪದಲ್ಲಿದ್ದಂತೆ ಭಾಸವಾಗುತ್ತದೆ.
ಇದನ್ನು ಗಮನಿಸಿ ಈ ಹಿಂದೆಯೇ “ಶಕ್ತಿ”ಯಲ್ಲಿ ವರದಿ ಪ್ರಕಟಗೊಂಡಿದ್ದು, ಕನಿಷ್ಟ ಪಕ್ಷ ಮೇಲ್ಭಾಗದಲ್ಲಿ ಟಾರ್ಪಲ್ ತೆಗೆದು ಈಗ ಆಧುನಿಕವಾಗಿ ತಯಾರಿತ ವಾಗುತ್ತಿರುವ ಉತ್ತಮ ಗುಣ ಮಟ್ಟದ ಪಾರದರ್ಶಕ ಶ್ವೇತ ಹಾಸು (ಶೀಟು) ಗಳನ್ನು ಅಳವಡಿಸುವಂತೆ ಸಲಹೆ ಮಾಡÀಲಾಗಿತ್ತು . ಈ ಬಗ್ಗೆ ಅನೇಕ ಸಂಘಟನೆಗಳು ಬೆಂಬಲ ಸೂಚಿಸಿ ಕೂಡಲೇ ಜಾರಿಗೊಳಿಸುವಂತೆಯೂ, ಇನ್ನೂ ಅನೇಕ ಸಂಘಟನೆಗಳು ಮೇಲ್ಭಾಗದಲ್ಲಿ ಯಾವದೇ ಛಾವಣಿ ಅಳವಡಿಸದಂತೆಯೂ ಆಗ್ರಹಿಸಿದ್ದವು. ಆದರೆ, “ಕನಿಷ್ಟ” ಪೂಜಾದಿಗಳಿಗೆ ಮಳೆಗಾಲದಲ್ಲಿ ತೊಂದರೆಯಾಗದಂತೆ ಬಿಳಿ ಶೀಟುಗಳನ್ನಾದರೂ ಅಳವಡಿ ಸುವ ಮೂಲಕ ಇದೀಗ ಕರಿ ಛಾಯೆ ಮೂಡಿಸಿ ಕಾವೇರಿಗೆ ನಿತ್ಯ ಗ್ರಹಣದ ದುರ್ದೆಶೆ ತರಿಸುತ್ತಿರುವ ವಾತಾವರಣ ವನ್ನಾದರೂ ಬದಲಾಯಿಸುವಂತೆ “ಶಕ್ತಿ” ಪರವಾಗಿ ಕೋರಲಾಗಿತ್ತು.
ಈ ಬಗ್ಗೆ ದೇವಸ್ಥಾನ ಆಡಳಿತಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರನ್ನು ಕೇಳಿದಾಗ ಪತ್ರಿಕೆಯಲ್ಲಿ ವರದಿ ಪ್ರಕಟಗೊಂಡ ಬಳಿಕ ಹಾಗೂ ಸಾರ್ವಜನಿಕಾಭಿಪ್ರ್ರಾಯ ಪರಿಗಣಿಸಿ ಮೇಲ್ಭಾಗದಲ್ಲಿನ ಟಾರ್ಪಲನ್ನು ತೆಗೆಸಿ ಪಾರದರ್ಶಕ ಶೀಟುಗಳನ್ನು ಅಳವಡಿಸಲು ವ್ಯವಸ್ಥೆ ಮಾಡಲಾಗಿತ್ತು. ಆದರೆ, ಅದನ್ನು ಅಳವಡಿಸಲು ಟೆಂಡರು ಅಂಗೀಕೃತಗೊಂಡ ಸಂಸ್ಥೆಯವರು ಸ್ಥಳಕ್ಕೆ ತೆರಳಿದಾಗ ಅವರನ್ನು ಕೆಲವರು ಬೆದರಿಸಿ ಕಳುಹಿಸಿದ್ದಾರೆ ಎಂದು ಸತೀಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇಂತಹ ಅಡ್ಡಿಪಡಿಸುವ ಮನೋಭಾವದ ವ್ಯಕ್ತಿಗಳಿಗೆ ಇಲ್ಲಿ ಕೇಳುವ ಪ್ರಶ್ನೆಯಿಷ್ಟೆ: ಹಿಂದೆ 2002 ರಲ್ಲಿ ತಲಕಾವೇರಿ ಜೀರ್ಣೋದ್ಧಾರಕ್ಕೆ ಮುನ್ನ ಕೇರಳದ ಖ್ಯಾತ ಜ್ಯೋತಿಷಿ ವಾರಿಯರ್ ಅವರು ಅಷ್ಟಮಂಗಲ ಪ್ರಶ್ನೆಯಲ್ಲಿ ಖಚಿತವಾಗಿ ಹೀಗೆ ಹೇಳಿ ದ್ದರು. ತಲಕಾವೇರಿ-ಭಾಗಮಂಡಲ ಕ್ಷೇತ್ರಗಳ ಜೀರ್ಣೋದ್ಧಾರವಾದರೆ, ಮುಂದೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಕಾವೇರಿ ವಿವಾದ ಸ್ಥಗಿತಗೊಳ್ಳುತ್ತದೆ. ರಾಜ್ಯದಲ್ಲಿ ಸಾಕಷ್ಟು ಮಳೆಯಾಗಲಿದ್ದು, ಶಾಂತಿ ನೆಲೆಸಲಿದೆ ಎಂದು ಸ್ಪಷ್ಟವಾಗಿ ನುಡಿದಿದ್ದರು. ಅದರಂತೆ ಎರಡೂ ಕ್ಷೇತ್ರಗಳ ಜೀರ್ಣೋದ್ಧಾರದ ಬಳಿಕ ರಾಜ್ಯದಲ್ಲಿ ಸಾಕಷ್ಟು ಮಳೆಯಾಗುತ್ತಿದ್ದು, ಕಾವೇರಿ ವಿವಾದ ಭುಗಿಲೇಳುವ ಸನ್ನಿವೇಶವೇ ಉದ್ಭವಿಸಿರಲಿಲ್ಲ. ಆದರೆ, ಜ್ಯೋತಿಷಿ ವಾರಿಯರ್ ತಮ್ಮ ಪ್ರಶ್ನೆಯಲ್ಲಿ ಮುಂದುವರಿದು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದರು. ಯಾವದೇ ಕಾರಣಕ್ಕೆ ಮೂಲ ಕ್ಷೇತ್ರದಲ್ಲಿ ಮತ್ತೆ ಅಪಚಾರಗಳಾಗಬಾರದು ಎಂದು ನುಡಿದಿದ್ದರು. ಆದರೆ, ಮೇಲಿಂದ ಮೇಲೆ ಭಕ್ತಾದಿಗಳ ಮಾತನ್ನು ನಿರ್ಲಕ್ಷಿಸಿ ಕಾವೇರಿ ಕುಂಡಿಕೆಯ ಮೇಲೆ ಟಾರ್ಪಲ್ ಹೊದಿಸಿ ಮಾತೆ ಕಾವೇರಿಯನ್ನು ಕತ್ತಲ ಕೂಪದಲ್ಲಿರಿಸಿ ರುವದು ಅಪಚಾರವಲ್ಲದೆ ಮತ್ತೇನು? ಇದಕ್ಕೆ ಸಾಕ್ಷಿಯೆಂಬಂತೆ ಪ್ರಸಕ್ತ ವರ್ಷ ಮಳೆಯ ಪ್ರಮಾಣವೂ ತೀರ ಕುಂಠಿತಗೊಡಿದ್ದು, ಇಡೀ ರಾಜ್ಯದಲ್ಲಿ, ನೆರೆ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಸ್ಥಿತಿ ನಿರ್ಮಾಣಗೊಂಡಿದೆ. ರಾಜ್ಯಾದ್ಯಂತ ಪ್ರತಿಭಟನೆಗಳ ಮೂಲಕ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗಿದ್ದು, ಜನಜೀವನ ಅಲ್ಲೋಲ ಕಲ್ಲೋಲಗೊಳ್ಳತೊಡಗಿದೆ.
ಜ್ಯೋತಿಷಿ ವಾರಿಯರ್ ಅವರು 2002 ರಲ್ಲಿ ಹೀಗೆ ಸ್ಷಷ್ಟಪಡಿಸಿದ್ದರು:- ಕ್ಷೇತ್ರದಲ್ಲಿ ಅಪಚಾರಗಳುಂಟಾದರೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗಂಭೀರ ಸ್ಥ್ಥಿತಿಯುಂಟಾಗಲಿದೆ.
ಕೊಡಗಿನ ಕುಲ ದೇವತೆ ಯೆನಿಸಿರುವ ಕಾವೇರಿಯ ಮೂಲ ಸ್ಥಾನದಲ್ಲಿ ಕೈಗೊಳ್ಳಬೇಕಾ ದಂತಹ ಯಾವದೇ ಪ್ರಮುಖ ಬದಲಾವಣೆಯ ನಿರ್ಧಾರಗಳ ಮುನ್ನ ಕೆಲವು ಪರಿಣಿತರನ್ನು ಸಂಪರ್ಕಿಸಿ ಸಮಾಲೋಚಿಸಿ ತೀರ್ಮಾನಿಸ ಬೇಕಾಗಿದೆ. ಈಗಲಾದರೂ ಕತ್ತಲೆಯನ್ನು ಹೋಗಲಾಡಿಸಿ ಹೊದಿಸಿರುವ ಟಾರ್ಪಲನ್ನು ತೆಗೆಸಲು ಆಡಳಿತಾಧಿಕಾರಿಗಳು ಕ್ರಮ ಕೈಗೊಳ್ಳಲಿ. ಪೂಜಾ ಕಾರ್ಯಕ್ಕೆ ಪಾರದರ್ಶಕ ಶೀಟುಗಳನ್ನು ಅಳವಡಿಸಿದರೆ ಮಳೆಯಿಂದ ಅರ್ಚಕರು, ಭಕ್ತಾದಿಗಳಿಗೆ ರಕ್ಷಣೆಗೆ ಧಕ್ಕೆಯಾಗದು ಎಂಬದು ಈ ಮೂಲಕ ಸಲಹೆ. ಈಗ ಮಳೆಗಾಲ ಕಳೆದು ಹೋಗುತ್ತಿದೆ. ಈಗಾಗಲೇ ರಾಜ್ಯದಲ್ಲಿ ಕಾವೇರಿಯ ವಿವಾದ ಕಾವೇರುತ್ತಿದೆ. ಈಗ ಕೈಗೊಳ್ಳಬೇಕಾದ ನಿರ್ಧಾರ ತಡವಾಯಿತಾದರೂ “ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ” ಎಂಬಂತೆ ಭವಿಷ್ಯತ್ನಲ್ಲಿ ಯಾದರೂ ನಾಡಿಗೆ ಒಳಿತಾಗ ಬಹುದು ಎನ್ನುವ ನಂಬಿಕೆಯಷ್ಟೆ, ಈಗ ಉಳಿದಿರುವ ಅಂಶ.
-ಜಿ.ರಾಜೇಂದ್ರ, ಮಾಜಿ ಕಾರ್ಯದರ್ಶಿ,
ತಲಕಾವೇರಿ-ಭಾಗಮಂಡಲ ಪುನರ್ ಪ್ರತಿಷ್ಠಾಪನಾ ಸಮಿತಿ
(2009 ರಲ್ಲಿ ವಿಸರ್ಜಿತ ಸಮಿತಿ)