ಆಲೂರು ಸಿದ್ದಾಪುರ, ಸೆ. 21: ಪ್ರಸಕ್ತ ವರ್ಷ ಮಳೆ ಕೈಕೊಟ್ಟ ಹಿನ್ನೆಲೆ ಮಳೆಯ ಆಗಮನಕ್ಕಾಗಿ ಮಾಲಂಬಿ ಮತ್ತು ಮುಳ್ಳೂರು ಗ್ರಾಮಸ್ಥರು ಮಾಲಂಬಿ ಗ್ರಾಮದಲ್ಲಿರುವ ಶ್ರೀ ಮಳೆಮಲ್ಲೇಶ್ವರ ಬೆಟ್ಟದಲ್ಲಿರುವ ಶ್ರೀ ಮಳೆಮಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯನ್ನು ಸಲ್ಲಿಸಿದರು. ಮಾಲಂಬಿ ಮಳೆಮಲ್ಲೇಶ್ವರ ಬೆಟ್ಟವನ್ನೇರಿ ಬೆಟ್ಟದ ಮೇಲಿರುವ ಶ್ರೀಮಳೆಮಲ್ಲೇಶ್ವರ ದೇವರಿಗೆ ಪೂಜೆ ಸಲ್ಲಿಸಿ ಪ್ರಾರ್ಥಿಸಿದರೆ ಮಳೆಯಾಗುತ್ತದೆ ಎಂಬವದು ಈ ಭಾಗದಲ್ಲಿ ಇತಿಹಾಸ ಪ್ರಸಿದ್ಧವಾಗಿದೆ. ನಾಡಿನಲ್ಲಿ ಮಳೆಯಾಗದೆ ಕ್ಷಾಮವಾದಾಗ ಈ ಬೆಟ್ಟವನ್ನೇರಿ ಪ್ರಾರ್ಥಿಸಿದಾಗ ಮಳೆ-ಬೆಳೆಯಾಗುತ್ತದೆ, ಅದಕ್ಕಾಗಿಯೇ ಮಳೆಮಲ್ಲೇಶ್ವರನು ಅವತರಿಸಿದ್ದಾನೆ ಎಂಬದು ಪ್ರತೀತಿಯಾಗಿದೆ.

ಮಾಲಂಬಿ ಗ್ರಾಮದಿಂದ ಸುಮಾರು 150 ಮಂದಿ ಮತ್ತು ಪಕ್ಕದ ಮುಳ್ಳೂರು ಗ್ರಾಮದಿಂದ ಸುಮಾರು 200 ಮಂದಿ ಸೇರಿಕೊಂಡು ಪ್ರತ್ಯೇಕ ವಾದ್ಯ ತಂಡಗಳೊಂದಿಗೆ ಮಳೆ ಮಲ್ಲೇಶ್ವರ ಬೆಟ್ಟವನ್ನೇರಿದರು. ನಂತರ ಬೆಟ್ಟದ ತುದಿಯಲ್ಲಿರುವ ಶ್ರೀ ಮಳೆಮಲ್ಲೇಶ್ವರ ದೇವಾಲಯದಲ್ಲಿ ನಾಡಿನಾದ್ಯಂತ ಉತ್ತಮ ಮಳೆ-ಬೆಳೆಯಾಗುವಂತೆ ಪ್ರಾರ್ಥಿಸಿದರು. ನಂತರ ಶ್ರೀ ಮಳೆಮಲ್ಲೇಶ್ವರ ಸ್ವಾಮಿಗೆ ಹೋಮ-ಹವನ ನೆರವೇರಿಸಿ ವಿಶೇಷ ಪೂಜಾ-ವಿಧಾನವನ್ನು ನೆರವೇರಿಸಿದರು. ಎರಡು ಗ್ರಾಮಗಳಿಂದ ಪ್ರತ್ಯೇಕವಾಗಿ ಅರ್ಚಕರಿಂದ ಪೂಜಾ ಕಾರ್ಯ ನೆರವೇರಿಸಲಾಯಿತು. ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮತ್ತು ಅನ್ನದಾನವನ್ನು ಏರ್ಪಡಿಸಲಾಗಿತ್ತು. ಎರಡು ಗ್ರಾಮಗಳಿಂದ ಪುರುಷ ಮತ್ತು ಮಹಿಳೆಯರು ಸೇರಿದಂತೆ ಭಕ್ತರು ಆಗಮಿಸಿ ಬೆಟ್ಟವನ್ನೇರಿ ಪೂಜೆ ಸಲ್ಲಿಸಿದರು