ಸೋಮವಾರಪೇಟೆ, ಜು. 2: ಮಳೆಯ ರಭಸಕ್ಕೆ ಸಮೀಪದ ಬಳಗುಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಯೊಂದರ ಮೇಲ್ಛಾವಣಿ ಮುರಿದು ಬಿದ್ದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಕೊಠಡಿಯ ಮೇಲ್ಛಾವಣಿ ದುಸ್ಥಿತಿಯಲ್ಲಿದ್ದ ಕಾರಣ ಬೀಗ ಹಾಕಿ, ತರಗತಿಗಳನ್ನು ಬೇರೆ ಕೊಠಡಿಯಲ್ಲಿ ನಡೆಸಲಾಗುತಿತ್ತು. ಕೊಠಡಿಯನ್ನು ದುರಸ್ತಿ ಪಡಿಸುವಂತೆ ಬೇಳೂರು ಗ್ರಾ.ಪಂ. ಸದಸ್ಯ ಕೆ.ಎ.ಯಾಕುಬ್ ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಚೌಡ್ಲು ಗ್ರಾಮದ ರಮೇಶ್ ಎಂಬವರ ಮನೆ ಮೇಲೆ ಮರ ಬಿದ್ದ ಪರಿಣಾಮ, ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ನಾಕೂರು-ಶಿರಂಗಾಲ ಗ್ರಾಮದ ಪೊನ್ನಪ್ಪ ಎಂಬವರ ಮನೆಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ಕಸಬಾ ಹೋಬಳಿಗೆ 69.4 ಮಿ.ಮೀ. ಶನಿವಾರಸಂತೆ 54, ಕೊಡ್ಲಿಪೇಟೆ 64.5, ಸುಂಟಿಕೊಪ್ಪ 17.2, ಶಾಂತಳ್ಳಿ 138, ಕುಶಾಲನಗರ 16.4 ಮಿ.ಮೀ. ಮಳೆಯಾಗಿದೆ.