ಮಡಿಕೇರಿ, ಆ. 15: ನಾಡಿನಾದ್ಯಂತ ಇಂದು 70ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿತ್ತು. ಎಲ್ಲೆಡೆ ಸ್ವಾತಂತ್ರ್ಯೋತ್ಸವವನ್ನು ಸಡಗರದೊಂದಿಗೆ ಆಚರಿಸಲಾಯಿತು. ಆದರೆ ಎಂದೂ ಕಾಣದ ವರುಣ ಇಂದು ಬಿರುಸು ತೋರುವದರೊಂದಿಗೆ ಎಲ್ಲರ ಉತ್ಸಾಹಕ್ಕೆ ತಣ್ಣೀರೆರಚಿದ.ಮಡಿಕೇರಿಯ ಕೋಟೆ ಆವರಣದಲ್ಲಿ 8.45ಕ್ಕೆ ಧ್ವಜಾರೋಹಣಕ್ಕೆ ಮುಹೂರ್ತ ನಿಗದಿಯಾಗಿತ್ತು. ಪಥ ಸಂಚಲನದಲ್ಲಿ ಭಾಗವಹಿಸಲು ಬಂದಿದ್ದ ಎನ್.ಸಿ.ಸಿ., ಸ್ಕೌಟ್‍ಗೈಡ್ಸ್, ಸೇವಾದಳದ ಮಕ್ಕಳು 8 ಗಂಟೆಗೆ ಅಲ್ಲಿ ಸೇರಿದ್ದರು. ಆದರೆ ಉಸ್ತುವಾರಿ ಸಚಿವರ ಆಗಮನ ಕೊಂಚ ತಡವಾದ್ದರಿಂದ ಕಾರ್ಯಕ್ರಮವೂ ಕೊಂಚ ತಡವಾಯಿತು. ಧ್ವಜಾರೋಹಣದ ನಂತರ ಅಧಿಕಾರಿಗಳು ಸಿದ್ಧಪಡಿಸಿದ್ದ ಸುದೀರ್ಘ ಭಾಷಣದ ಸಾರಾಂಶವನ್ನು ವಾಚಿಸಿದರು. ಸುಮಾರು ಅರ್ಧ ಗಂಟೆಗಳ ಭಾಷಣ ಕೇಳುತ್ತಾ, ಮಳೆಯಲ್ಲಿ ನಿಂತಿದ್ದ ಮಕ್ಕಳು ನಿತ್ರಾಣರಾಗಿ ಒಬ್ಬೊಬ್ಬರಾಗಿ ತಲೆ ತಿರುಗಿ ಬೀಳುತ್ತಿದ್ದುದು ಕಂಡು ಬಂದಿತು. ದೂರದೂರುಗಳಿಂದ ಬೆಳಿಗ್ಗೆಯೇ ಮಕ್ಕಳು ತಿಂಡಿಕೂಡ ತಿನ್ನದೆ ಬಂದಿದ್ದ ಕಾರಣ ಬಸವಳಿದಿದ್ದರು. ಇನ್ನು ಸಾಂಸ್ಕøತಿಕ ಕಾರ್ಯಕ್ರಮ ನೀಡುತ್ತಿದ್ದ ವೇಳೆ ಮಳೆಯಿಂದಾಗಿ ಮಕ್ಕಳು ನೆನೆದು ಮುದ್ದೆಯಾದರು. ಕಾರ್ಯಕ್ರಮ ವೀಕ್ಷಿಸಲು ಬಂದಿದ್ದವರಿಗೂ ಸರಿಯಾಗಿ ನೋಡಲಾರದೆ ನಿರಾಸೆ ಅನುಭವಿಸಿದರು.