ಸಿದ್ದಾಪುರ, ಆ.18: ಮಗು ಬದುಕಿ ಉಳಿದಿಲ್ಲ ಸತ್ತು ಹೋಗಿದೆ ಎಂದು ವೈದ್ಯರು ಹೇಳಿದರು. ದು:ಖದ ಮಡುವಿನಲ್ಲಿದ ಕುಟುಂಬಸ್ಥರು ಆಗಷ್ಟೇ ಜನ್ಮತಾಳಿದ್ದ ಆ ಪುಟ್ಟ ಹಸುಳೆಯನ್ನು ಕರ್ಮಾನುಸಾರ ಅಂತ್ಯಸಂಸ್ಕಾರ ನೆರವೇರಿಸಲು ಸಿದ್ಧತೆಯಲ್ಲಿ ತೊಡಗಿದ್ದರು. ಅಂತಿಮವಾಗಿ ಮಗುವನ್ನು ಹೂಳಲು ಗುಂಡಿಯನ್ನು ತೆಗೆಯಲಾಯಿತು. ಇನ್ನೇನು ಮಸಣದ ಸಮೀಪ ತಲುಪಬೇಕು... ಅಷ್ಟರಲ್ಲಿ ಪುಟ್ಟ ಹಸುಳೆಯ ಶರೀರ ಮಿಸುಕಾಡಿದಂತಾಯಿತು. ಮಗು ಕಣ್ಣು ಬಿಟ್ಟಿತ್ತು. ಸಣ್ಣಗೆ ಅರಚಲು ಪ್ರಾರಂಭಿಸಿದ ಹಸುಳೆಯನ್ನು ಮಸಣದಿಂದ ಮರಳಿ ಮನೆಗೆ ಕೊಂಡೊಯ್ಯಲಾಯಿತು. ಕಡು ಕತ್ತಲೆಯನ್ನು ಸೀಳಿ ಮಿಂಚೊಂದು ಬಂದಂತೆ ಮತ್ತೆ ಆ ಮನೆಯಲ್ಲಿ ಸಂಭ್ರಮ, ಕೇಕೆ. ಸೂತಕದ ವಾತಾವರಣ ಮರೆಯಾಯಿತು.

ಆದರೆ... ಸಿದ್ದಾಪುರ ಸಮೀಪದ ಕೂಡುಗದ್ದೆ ನಿವಾಸಿ ಸುಧಾಕರ ಎಂಬವರ ಮಗಳು ಶರಣ್ಯ ಎಂಬ ಯುವತಿ ಕಳೆದ ವಾರ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದಳು. ಮಗು ಹುಟ್ಟಿದ ಆ ಕ್ಷಣ ದಂಪತಿಗಳು ಸೇರಿದಂತೆ ಕುಟುಂಬ ಸದಸ್ಯರು ತಣ್ಣನೆಯ ಸಂತಸದಲ್ಲಿ ತೇಲಿದರು. ಆದರೆ ಅವರ ಸಂತಸಕ್ಕೆ ಇದ್ದದ್ದು ಅಲ್ಪ ಆಯಸ್ಸು. ಮಗು ನಿರೀಕ್ಷೆಯಂತೆ ಆರೋಗ್ಯಕರವಾಗಿ ಇಲ್ಲ. ಮಗುವಿನ ಹೊಟ್ಟೆಯಲ್ಲಿ ಏನೋ ತೊಂದರೆ ಇದ್ದಂತೆ ಕಾಣುತ್ತಿದೆ, ತಕ್ಷಣ ಚಿಕಿತ್ಸೆ ಕೊಡಿಸಿದರೆ ಮಗು ಬದುಕುವ ಸಾಧ್ಯತೆಯಿದೆ ಎಂದು ವೈದ್ಯರು ಹೇಳಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಮೈಸೂರಿಗೆ ಕರೆದುಕೊಂಡು ಹೋಗಲು ಮಡಿಕೇರಿಯ ವೈದ್ಯರು ಸೂಚಿಸಿದರು. ವೈದ್ಯರು ಹೇಳಿದಂತೆ ಮಗುವನ್ನು ಎತ್ತಿಕೊಂಡು ಕುಟುಂಬಸ್ಥರು ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದೌಡಾಯಿಸಿದರು. ಮೈಸೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿದೆ ತಕ್ಷಣ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಬೇರೊಂದು ಖಾಸಗಿ ಆಸ್ಪತ್ರೆ ಹೆಸರು ಸೂಚಿಸಿ ಅಲ್ಲಿಗೆ ಕರೆದುಕೊಂಡು ಹೋಗಲು ಹೇಳಿದರು. ವೈದ್ಯರು ಸೂಚಿಸಿದ ಆಸ್ಪತ್ರೆಯಲ್ಲಿ ತಕ್ಷಣ ದಾಖಲಿಸಲಾಯಿತು. ಪರಿಶೀಲಿಸಿದ ವೈದ್ಯರು ಮಗುವಿನ ಕರಳು ಬಳ್ಳಿ ಯಕೃತ್‍ನ ಒಳಗೆ ಸುರುಳಿ ಸುತ್ತಿಕೊಂಡಿದೆ ಎಂದು ಹೇಳಿ ಹುಟ್ಟಿದ ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಿ ತುರ್ತು ನಿಗಾ ಘಟಕದಲ್ಲಿ ಇಡಲಾಯಿತು. ಇನ್ನೇನು ಮಗು ಆರೋಗ್ಯವಂತವಾಗಿ ಉಳಿಯಿತಲ್ಲ ಎಂದು ದಂಪತಿಗಳು ನಿಟ್ಟುಸಿರು ಬಿಡುವಷ್ಟರಲ್ಲಿ ಇವರ ಬಳಿ ಬಂದ ವೈದ್ಯರು ಕೈ ಮೀರಿ ಪ್ರಯತ್ನ ನಡೆಸಿದೆವು ಆದರೆ ಮಗುವನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು. ತಮ್ಮ ಯೋಗ, ಹಣೆಬರಹ, ವಿಧಿಯಾಟ ಎಂದು ರೋಧಿಸಿದ ಮಗುವಿನ ಪೋಷಕರು ಕುಟುಂಬದ ಸದಸ್ಯರಿಗೆ ಕರೆ ಮಾಡಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸಲು ಸೂಚಿಸಿದರು.

ಇತ್ತ ಸಿದ್ದಾಪುರದ ಕೂಡುಗದ್ದೆಯಲ್ಲಿ ಮಗುವಿನ ಅಂತಿಮ ದರ್ಶನಕ್ಕೆ ಆಗಮಿಸಿದ್ದ ಗ್ರಾಮಸ್ಥರು, ನೆರೆಹೊರೆಯವರು, ಬಂಧು, ಮಿತ್ರರ ನಡುವೆ ಸ್ಮಶಾನ ಮೌನ ಆವರಿಸಿತ್ತು. ಅಂತಿಮವಾಗಿ ಮಗುವನ್ನು ಸ್ಮಶಾನಕ್ಕೆ ಕೊಂಡೊಯ್ಯಲಾಯಿತು.

ಸ್ಮಶಾನದ ಹಾದಿಯಲ್ಲಿ ಮಗು ಮಿಸುಕಾಡಿತು, ಮುದ್ದು ಮಗುವಿನ ಕಣ್ಣು ತೆರೆÀದಿತ್ತು. ಹೃದಯ ಮಿಡಿಯುತ್ತಿತ್ತು. ನೆರೆದವರೆಲ್ಲರಿಗೂ ಜೀವ ಬಂದಂತಾಗಿತು. ತಕ್ಷಣ ಮಗುವನ್ನು ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ವೈದ್ಯರು ಸೇರಿದಂತೆ ಮತ್ತೊಬ್ಬರು ವೈದ್ಯರ ಬಳಿ ಕೊಂಡೊಯ್ಯಲಾಯಿತು.

ಅದಾದ ನಂತರ ಮೈಸೂರಿನ ಎರಡು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಮಗು ವನ್ನು ಚಿಕಿತ್ಸೆಗೆ ಒಳಪಡಿಸಲಾಯಿತು. ಅಂತಿಮವಾಗಿ ಕ್ಯಾಲಿಕೆಟ್‍ನ ಮೆಡಿಕಲ್ ಕಾಲೇಜಿಗೆ ಆ ಹಸುಳೆಯನ್ನು ದಾಖಲಿಸಲಾಗಿದೆ. ಮಗುವನ್ನು ಬದುಕಿಸುವ ಆಶ್ವಾಸನೆಯನ್ನು ವೈದ್ಯರು ನೀಡಿದ್ದಾರೆ. ಆ ಪುಟ್ಟ ಹಸುಳೆ ಆರೋಗ್ಯದಿಂದ, ಮುದ್ದಾದ ನಗುವಿನೊಂದಿಗೆ ಮರಳಿ ಬರಲಿ ಎಂಬ ಪ್ರಾರ್ಥನೆ ನಮ್ಮೆಲ್ಲರದಾಗಿರಲಿ...

-ವಸಂತ್, ಸಿದ್ದಾಪುರ.