ವೀರಾಜಪೇಟೆ, ಸೆ. 23: ವೀರಾಜಪೇಟೆಯಲ್ಲಿರುವ ದಕ್ಷಿಣ ಕೊಡಗು ಮುಸ್ಲಿಂ ಸಹಕಾರ ಸಂಘ 2015-16ನೇ ಸಾಲಿನಲ್ಲಿ ಒಟ್ಟು ರೂ. 82,80.973 ಲಾಭ ಗಳಿಸಿದ್ದು, ಸಂಘ ಪ್ರಗತಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಬಿ.ಆರ್. ಮೊಹಮ್ಮದ್ ಶುಹೇಬ್ ತಿಳಿಸಿದರು.
ಇಲ್ಲಿನ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಮೊಹಮ್ಮದ್ ಶುಹೇಬ್ ಅವರು ಸಂಘ ಕಳೆದ ಮಾರ್ಚ್ 31ಕ್ಕೆ 3254 ಸದಸ್ಯರುಗಳಿದ್ದು ಇದರ ಪಾಲು ಬಂಡವಾಳ ರೂ. 35,83.978 ಆಗಿದ್ದು, ರೂ. 4,11,96,916 ಸದಸ್ಯರುಗಳ ಠೇವಣಿ ಹೊಂದಿದೆ. ಮುಂದಿನ ಸಾಲಿನಿಂದ ಸಂಘದ “ಎ” ತರಗತಿ ಸದಸ್ಯರುಗಳಿಗೆ ಬಡ್ಡಿ ರಹಿತವಾಗಿ ರೂ. 50,000 ದವರೆಗೆ 6 ತಿಂಗಳ ಅವಧಿಗೊಳಪಟ್ಟು ರೂ. 1500 ಸೇವಾ ಶುಲ್ಕದೊಂದಿಗೆ ಆಭರಣ ಸಾಲ ನೀಡಲಾಗುವದು. 6 ತಿಂಗಳ ಅವಧಿ ಮೇಲ್ಪಟ್ಟರೆ ಶೇ. 12 ರಂತೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಸಂಘದ ಸದಸ್ಯರುಗಳ ಹಿತ ಕಾಪಾಡುವದರೊಂದಿಗೆ ಸಂಘದಲ್ಲಿ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.
ಸಭೆಯಲ್ಲಿ ಉಪಾಧ್ಯಕ್ಷ ಕನ್ನಡಿಯಂಡ ಜುಬೇರ್, ಮಾಜಿ ಅಧ್ಯಕ್ಷ ಎಸ್.ಹೆಚ್. ಮೈನುದ್ದೀನ್, ನಿರ್ದೇಶಕರುಗಳಾದ ಅಬ್ದಲ್ ಸತ್ತಾರ್, ಮಹಮ್ಮದ್ ಶಫಿ, ಜಬಿವುಲ್ಲಾ, ಅಬು ಸಾಲೇಹ, ಎಂ.ಕೆ. ನಜೀಬ್, ಮನ್ಸೂರ್ ಆಲಿ, ಜಿಯಾವುಲ್ಲಾ, ಮಹಮ್ಮದ್ ಯೂಸೂಫ್, ಅಲ್ತಾಫ್, ಸಮೀವುಲ್ಲಾ, ಅಬೀದಾ ಬೇಗಂ, ತಸ್ನೀಂ ಅಕ್ತರ್ ಹಾಗೂ ಸಂಘದ ವ್ಯವಸ್ಥಾಪಕ ಕೆ.ಐ. ಮುಕ್ತಾರ್ ಉಪಸ್ಥಿತರಿದ್ದರು.