ಮೂರ್ನಾಡು, ಮೇ 12 : ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಪದಗ್ರಹಣ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನದ 101ನೇ ವರ್ಷಾಚರಣೆ ಸಮಾರಂಭ ಇಂದು ನಡೆಯಿತು.

ಇಲ್ಲಿನ ಮಾರುತಿ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಏರ್ಪಡಿಸಲಾದ ಸಮಾರಂಭವನ್ನು ಮಾರುತಿ ವಿದ್ಯಾಸಂಸ್ಥೆ ಅಧ್ಯಕ್ಷ ಮುಂಡಂಡ ಅಪ್ಪಚ್ಚು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನೂತನ ಪದಾಧಿಕಾರಿಗಳು ಜವಬ್ದಾರಿಯುತವಾಗಿ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಭಾಷಾ ಬೆಳವಣಿಗೆಗೆ ಶ್ರಮಿಸಬೇಕು. ಘಟಕಗಳು ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸಿಬೇಕು. ಜಾತಿ, ಮತ, ಭೇದವಿಲ್ಲದೆ ಎಲ್ಲರನ್ನೂ ಕಾರ್ಯಕ್ರಮಗಳಲ್ಲಿ ಸಂಘಟಿಸುವ ಕಾರ್ಯವಾಗಬೇಕು ಎಂದು ಕರೆ ನೀಡಿದರು.

ಸಮಾರಂಭದಲ್ಲಿ ಕ.ಸಾ.ಪ ಮೂರ್ನಾಡು ಹೋಬಳಿ ಘಟಕ ನಿಕಟಪೂರ್ವ ಅಧ್ಯಕ್ಷ ಡಾ. ಮೇಚಿರ ಸುಭಾಶ್ ನಾಣಯ್ಯ ನೂತನ ಅಧ್ಯಕ್ಷ ಪಿ.ಪಿ. ಸುಕುಮಾರ್ ಅವರಿಗೆ ಕನ್ನಡ ಧ್ವಜ ನೀಡಿ ಅಧಿಕಾರ ಹಸ್ತಾಂತರಿಸಿದರು.

ಕೊಡಗು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲೋಕೇಶ್ ಸಾಗರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನ, ಮಾರುತಿ ವಿದ್ಯಾಸಂಸ್ಥೆ ಪ್ರಾಂಶುಪಾಲೆ ಮುಂಡೋಟಿರ ರಾಣಿ ಅಪ್ಪಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕೊಡಗು ಜಿಲ್ಲಾ ಕ.ಸಾ.ಪ ಅಧ್ಯಕ್ಷ ಲೋಕೇಶ್ ಸಾಗರ್ ಅವರನ್ನು ಹೋಬಳಿ ಘಟಕದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

ಕ.ಸಾ.ಪ ಸದಸ್ಯ ಪುದಿಯೊಕ್ಕಡ ರಮೇಶ್ ಸ್ವಾಗತಿಸಿ, ಕೋಶಾಧಿಕಾರಿ ರವಿಕೃಷ್ಣ ಕಾರ್ಯಕ್ರಮ ನಿರೂಪಿಸಿ, ಸಾಬ ಸುಬ್ರಮಣಿ ವಂದಿಸಿದರು.