ಸೋಮವಾರಪೇಟೆ, ಸೆ. 23: ದೇಶದ ಮುಂದಿನ ಭವಿಷ್ಯ ಯುವ ಜನತೆಯ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಯುವಕರು ಉತ್ತಮ ಶಿಕ್ಷಣ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.
ಇಲ್ಲಿನ ಮಡಿಕೇರಿ ರಸ್ತೆಯಲ್ಲಿರುವ ಸಫಾಲಿ ಸಭಾಂಗಣದಲ್ಲಿ ಆಯೋಜಿಸಿದ್ದ ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಾಲಾ ಹಂತದಲ್ಲಿಯೇ ಶಿಕ್ಷಣ, ಕ್ರೀಡೆಯತ್ತ ಗಮನಹರಿಸುವದರ ಜೊತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಲ್ಲಿ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ಪಕ್ಷ ಸಂಘಟನೆಯಲ್ಲೂ ಕೂಡ ಯುವಕರ ಪಾತ್ರ ಅಪಾರವಾಗಿದೆ. ಬಿಜೆಪಿ ಯುವ ಮೋರ್ಚಾ ಘಟಕದಲ್ಲಿ ಪ್ರಾಮಾಣಿಕ ವಾಗಿ ಹಾಗೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರಿಂದ ತಾನು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಸಚಿವನಾಗುವ ಮಟ್ಟಕ್ಕೆ ಬೆಳೆದೆ ಎಂದು ಶಾಸಕರು ಈ ಸಂದರ್ಭ ಸ್ಮರಿಸಿಕೊಂಡರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ ಮಾತನಾಡಿ, ಪಕ್ಷವನ್ನು ತಾಲೂಕಿನಾದ್ಯಂತ ಉತ್ತಮವಾಗಿ ಸಂಘಟಿಸಲು ಯುವಮೋರ್ಚಾದ ಸದಸ್ಯರು ಶ್ರಮಿಸುವದಾಗಿ ತಿಳಿಸಿದರು. ಈ ನಿಟ್ಟಿನಲ್ಲಿ ಸದ್ಯದಲ್ಲೇ ಬೂತ್ ಸಮಿತಿಗಳನ್ನು ರಚಿಸುವದಾಗಿ ಹೇಳಿದರು. ಸಂಘಟನಾ ಕಾರ್ಯದರ್ಶಿ ಶಶಿಕಾಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಉಪಾಧ್ಯಕ್ಷ ಪ್ರಸನ್ನ ನಾಯರ್, ಖಜಾಂಚಿ ಪ್ರಜಾ ಪೂಣಚ್ಚ ಉಪಸ್ಥಿತರಿದ್ದರು.