ಮಡಿಕೇರಿ, ಜು. 6: ಹೇಳಿ..., ಕೇಳಿ..., ಮಡಿಕೇರಿಗೆ ಇನ್ನೊಂದು ಹೆಸರೇ ಮಂಜಿನ ನಗರಿ..., ಸುಡು ಬೇಸಿಗೆಯಲ್ಲೂ ಒಮ್ಮೊಮ್ಮೆ ಮಂಜು ಮುಸುಕಿರುತ್ತದೆ. ರಾತ್ರಿ ವೇಳೆ ಯಲ್ಲಂತೂ ಇದು ಅಧಿಕವಾಗಿರುತ್ತದೆ. ಹಾಗೆಂದ ಮೇಲೆ ಇನ್ನೂ ಮಳೆಗಾಲ ದಲ್ಲಿ ಹೇಳಬೇಕೆ...? ಎದುರಿಗಿದ್ದವರೇ ಕಾಣದಂತಹ ಪರಿಸ್ಥಿತಿ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಬೇಸಿಗೆಯಲ್ಲೇ ಪ್ರತಿನಿತ್ಯ ಅವಘಡಗಳಾಗುತ್ತಿದ್ದ ಜ. ತಿಮ್ಮಯ್ಯ ವೃತ್ತದಲ್ಲಿರುವ ರಸ್ತೆ ವಿಭಜಕಕ್ಕೆ ಇಂದು ರಾತ್ರಿ ಜೀಪೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯಾಗಿದ್ದು, ಮಾತ್ರವಲ್ಲದೆ ವಿಭಜಕದ ಮೇಲೇರಿದ ಪರಿಣಾಮ ಜೀಪ್‍ನ ಯಂತ್ರಗಳು, ಕೆಲವೊಂದು ಭಾಗಗಳು ಜಖಂ ಗೊಂಡಿವೆ.

ಜ. ತಿಮ್ಮಯ್ಯ ರಸ್ತೆಯಿಂದ ಮೈಸೂರು ಕಡೆಗಿರುವ ರಸ್ತೆ ವಿಭಜಕ ಸರಿಯಾಗಿ ಹಗಲು ವೇಳೆಯಲ್ಲಿಯೇ ಗೋಚರಿಸುವದಿಲ್ಲ. ಇನ್ನೂ ರಾತ್ರಿ ವೇಳೆಯಲ್ಲಂತೂ ಅಗೋಚರ...! ಮೈಸೂರು ರಸ್ತೆಯಲ್ಲಿ ಬರುವ ವಾಹನಗಳು ರಸ್ತೆ ನೇರವಾಗಿರುವದ ರಿಂದ ಅತಿ ವೇಗದಲ್ಲೇ ಬರುತ್ತವೆ. ದಿಢೀರನೇ ಪ್ರತ್ಯಕ್ಷವಾಗುವ ವಿಭಜಕ ಗೋಚರಿಸದೆ ಡಿಕ್ಕಿ ಹೊಡೆದು ಅವಘಡಗಳು ಸಂಭವಿಸುತ್ತಿವೆ. ಪ್ರತಿ ರಾತ್ರಿ ಇಲ್ಲಿ ಒಂದಿಲ್ಲೊಂದು ವಾಹನಗಳು ಮಗುಚಿಕೊಳ್ಳುತ್ತವೆ.

ಇದುವರೆಗೆ ಈ ರಸ್ತೆ ರಾಜ್ಯ ಹೆದ್ದಾರಿಯಾಗಿತ್ತು. ಇದೀಗ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆಯಾದ ಬಳಿಕ ಇದರ ನಿರ್ವಹಣೆ ಸಂಪೂರ್ಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುತ್ತಿದೆ. ಇಲ್ಲಿನ ಅಪಾಯದ ಪರಿಸ್ಥಿತಿ ಬಗ್ಗೆ ಇತ್ತೀಚೆಗೆ ಚೇಂಬರ್ ಆಫ್ ಕಾಮರ್ಸ್ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆ ಅಭಿಯಂತರರನ್ನು ಭೇಟಿ ಮಾಡಿ ಗಮನಕ್ಕೆ ತಂದ ಸಂದರ್ಭ ಅಭಿಯಂತರರು ಈ ವಿಚಾರ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಡಳಿತ ಈ ಬಗ್ಗೆ ಆಸಕ್ತಿ ವಹಿಸಿ ಸಂಬಂಧಿಸಿದವರ ಗಮನಕ್ಕೆ ತಂದು ಹೆಚ್ಚಿನ ಅಪಾಯವನ್ನು ತಪ್ಪಿಸಬೇಕಾಗಿದೆ ಎಂದು ಚೇಂಬರ್‍ನ ಜಂಟಿ ಕಾರ್ಯದರ್ಶಿ ಅಂಬೆಕಲ್ ನವೀನ್ ಮನವಿ ಮಾಡಿದ್ದಾರೆ.

- ಸಂತೋಷ್.