ನವದೆಹಲಿ, ಸೆ.30 : ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ಅ.1ರಿಂದ ಅ.6 ರವರೆಗೆ ತಮಿಳುನಾಡಿಗೆ ನೀರು ಬಿಡಬೇಕು ಎಂದು ಆದೇಶಿಸಿರುವ ಸುಪ್ರೀಂ ಕೋರ್ಟ್ ಕರ್ನಾಟಕದ ವಾದಕ್ಕೆ ಎಳ್ಳು, ನೀರು ಬಿಟ್ಟಿದೆ.ಅ.1ರಿಂದ ಅ.6 ರವರೆಗೆ ತ.ನಾಡಿಗೆ 6 ಸಾವಿರ ಕ್ಯೂಸೆಕ್ ನೀರು ಬಿಡಬೇಕು ಎಂದು ತೀರ್ಪು ನೀಡಿರುವ ಸುಪ್ರೀಂ, ಒಟ್ಟು 36 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸೂಚಿಸಿದೆ. ಇಷ್ಟೇ ಅಲ್ಲದೆ ವಿಚಾರಣೆ ಯನ್ನು ಗುರುವಾರಕ್ಕೆ ಮುಂದೂಡಿದೆ.

ಅ.4ರೊಳಗೆ ಕಾವೇರಿ ಮಂಡಳಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್ ಆದೇಶ ಪಾಲಿಸಿಲ್ಲ. ಇದರಿಂದ ನ್ಯಾಯಾಂಗ ವ್ಯವಸ್ಥೆಗೆ ಧಕ್ಕೆ ತಂದಿದೆ. ದೇಶದ ಎಲ್ಲಾ ರಾಜ್ಯಗಳು ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು.

ದೇಶದ ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕ ರಾಜ್ಯವೂ ಒಂದು. ನ್ಯಾಯಾಂಗದ ಆದೇಶವನ್ನು ಪಾಲಿಸ ಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕರ್ನಾಟಕಕ್ಕೆ ಆಘಾತ!

ನಾಲ್ಕು ವಾರಗಳಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಿ ಎಂದಿದ್ದ ಸುಪ್ರೀಂಕೋರ್ಟ್ ತನ್ನ ಆದೇಶ ಬದಲಿಸಿ ತ್ವರಿತವಾಗಿ ಮಂಡಳಿ ರಚನೆಗೆ ಆದೇಶಿಸಿದೆ. ಸುಪ್ರೀಂ ಆದೇಶಕ್ಕೆ ಕೇಂದ್ರ ಸರ್ಕಾರ ಕೂಡಾ ತಲೆ ಬಾಗಿದೆ. ಈ ಮೂಲಕ ಕರ್ನಾಟಕಕ್ಕೆ ಭಾರಿ ಆಘಾತವಾಗಿದೆ.

ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡುವಂತೆ ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠ ನೀಡಿರುವ ಸೂಚನೆ ದ್ವಂದ್ವಮಯವಾಗಿದೆ ಎಂದು ಕಾನೂನು ತಜ್ಞರು ಅಭಿಪ್ರಾಯ ಪಟ್ಟಿದ್ದರು.

ವಿಸ್ತೃತ ನ್ಯಾಯಪೀಠದ ತೀರ್ಪು ಬಾಕಿ ಇರುವಾಗ ದ್ವಿಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸುವ ಅವಕಾಶವಿತ್ತು. ಆದರೆ, ಕರ್ನಾಟಕದ ವಕೀಲರು ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿಲ್ಲ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ಅರ್ಜಿ ಸಲ್ಲಿಸದಿರುವದು ಈಗ ಮುಳುವಾಗಲಿದೆ.ಮಂಡಳಿ ರಚನೆ ಮಾಡಲು ಅಟಾರ್ನಿ ಜನರಲ್ ಅವರ ಸಲಹೆ ಕೇಳುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ನಾಲ್ಕು ವಾರಗಳಲ್ಲಿ ಮಂಡಳಿ ರಚನೆ ಮಾಡಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ.

ಶುಕ್ರವಾರ ನಡೆದ ವಿಚಾರಣೆ ವೇಳೆ ಅಕ್ಟೋಬರ್ 4ರೊಳಗೆ ನಿರ್ವಹಣಾ ಮಂಡಳಿ ರಚಿಸಲು ಸಾಧ್ಯವೇ ಎಂದು ಕೇಂದ್ರ ಸರ್ಕಾರಕ್ಕೆ ದ್ವಿಸದಸ್ಯ ಪೀಠ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರು ಮಂಡಳಿ ರಚಿಸುವದಾಗಿ ಹೇಳಿದರು.

ವಾದದಲ್ಲಿ ಸೋತಿದ್ದು ಹೇಗೆ?

ಈ ಹಿಂದಿನ ಆದೇಶ ಪಾಲಿಸದ ಬಗ್ಗೆ ನ್ಯಾಯಾಂಗ ನಿಂದನೆಯಾಗಲಿ, ನಿರ್ವಹಣಾ ಮಂಡಳಿಗೆ ವಿರೋಧದ ಬಗ್ಗೆಯಾಗಲಿ ಚರ್ಚೆಯಾಗಿಲ್ಲ. ನೀರು ಬಿಟ್ಟು ನಂತರ ವಿಚಾರಣೆಗೆ ಬನ್ನಿ ಎಂದು ಸುಪ್ರೀಂ ಸೂಚಿಸಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿರೋಧಿಸಿದ ಅರ್ಜಿಯನ್ನು ಹಾಕಿಲ್ಲ. ಸುಪ್ರೀಂ ಆದೇಶ ಪಾಲಿಸದಿದ್ದರೆ ಸಂವಿಧಾನ ಬಿಕ್ಕಟ್ಟು ಉದ್ಭವಿಸುವ ಸಾಧ್ಯತೆ ಬಗ್ಗೆ ಚರ್ಚೆಯಾಗಿಲ್ಲ.

ಮಂಡಳಿಯಾದರೆ ಏನು ಪರಿಣಾಮ?

ಒಮ್ಮೆ ಈ ಮಂಡಳಿ ರಚನೆಯಾದರೆ ಕಾವೇರಿ ಮೇಲುಸ್ತುವಾರಿ ಸಮಿತಿ ಬೆಲೆ ಕಳೆದುಕೊಳ್ಳಲಿದೆ. ಕಾವೇರಿ ನೀರು ಇರುವ ಕೆಆರ್ ಎಸ್, ಹೇಮಾವತಿ ಕಬಿನಿ, ಹಾರಂಗಿ ಅಣೆಕಟ್ಟಿನ ಮೇಲೆ ಕರ್ನಾಟಕ ಸರ್ಕಾರ ನಿಯಂತ್ರಣ ಕಳೆದುಕೊಳ್ಳಲಿದೆ. ತಮಿಳುನಾಡಿಗೆ ಯಾವಾಗ ನೀರು ಬಿಡಬೇಕು? ಎಷ್ಟು ನೀರು ಬಿಡಬೇಕು ಎಂಬದನ್ನು ಮಂಡಳಿ ನಿರ್ಧರಿಸಲಿದೆ.

ಅಂತಿಮ ಆದೇಶ ಮುಖ್ಯ

ತಮಿಳುನಾಡು ಪ್ರತಿ ದಿನ 20,000 ಕ್ಯೂಸೆಕ್ಸ್ ನೀರು ಬೇಕೆಂದು ಮನವಿ ಮಾಡಿತ್ತು. ಆದರೆ, ಪ್ರತಿನಿತ್ಯ 12,000 ಕ್ಯೂಸೆಕ್ಸ್ ನೀರು ಹರಿಸುವಂತೆ ಕರ್ನಾಟಕಕ್ಕೆ ಸುಪ್ರೀಂಕೋರ್ಟ್ ಆದೇಶಿಸಿತ್ತು. ಕಾವೇರಿ ಮೇಲುಸ್ತುವಾರಿ ಸಮಿತಿಯಿಂದ ಪ್ರತಿ ದಿ&divound; À(10 ದಿನದ ಮಟ್ಟಿಗೆ) 3,000 ಕ್ಯೂಸೆಕ್ಸ್ ನಂತರ 6,000 ಕ್ಯೂಸೆಕ್ಸ್, ಈಗ ಸೆ.30ರಂದು 3.13 ಟಿಎಂಸಿ ನೀರು ಬಿಡಲು ಸೂಚಿಸಲಾಗಿದೆ ಆದರೆ, ಕರ್ನಾಟಕದ ಪಾಲಿಗೆ ತೀರ್ಪಿನ ಅಂತಿಮ ಆದೇಶ (ಬಹುಶಃ ಅಕ್ಟೋಬರ್ 18ರಂದು) ಮುಖ್ಯವಾಗಲಿದೆ

ಕರ್ನಾಟಕದ ಅಗತ್ಯ ಎಷ್ಟಿದೆ?

ಬೆಂಗಳೂರು, ಮೈಸೂರು, ಮಂಡ್ಯ ಸೇರಿದಂತೆ 48 ನಗರ ಪ್ರದೇಶ, 635 ಗ್ರಾಮೀಣ ಭಾಗಗಳು ಕಾವೇರಿ ಜಲಾನಯನ ಪ್ರದೇಶದ ಮೇಲೆ ಅವಲಂಬಿತವಾಗಿವೆ. ಮೇ 2017ರ ತನಕ 30ಟಿಎಂಸಿಅಡಿ ನೀರಿನ ಅಗತ್ಯವಿದೆ.

ಕಟ್ಟಕಡೆಯ ಅವಕಾಶ

ನ್ಯಾಯಾಂಗದ ಆದೇಶಕ್ಕೆ ತಲೆಬಾಗಿ ಅಕ್ಟೋಬರ್ 1 ರಿಂದ 6 ರತನಕ ತಮಿಳುನಾಡಿಗೆ ನೀರು ಬಿಡಿ. ಇಲ್ಲದಿದ್ದರೆ, ಪರಿಣಾಮವನ್ನು ಎದುರಿಸಿ ಎಂದು ಸರ್ವೋಚ್ಚ ನ್ಯಾಯಾಲಯ ಕರ್ನಾಟಕಕ್ಕೆ ತಪರಾಕಿ ಕೊಟ್ಟಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶ ಪಾಲಿಸದಿರುವದು ನಿಜಕ್ಕೂ ದುರದೃಷ್ಟಕರ. ಕರ್ನಾಟಕ ಭಾರತದ ಒಂದು ಭಾಗ. ನೀವು ಕಾನೂನಿಗೆ ಮತ್ತು ಸಂವಿಧಾನದ 144ನೇ ಅನುಚ್ಛೇದಕ್ಕೆ ತಲೆ ಬಾಗಲೇಬೇಕು ಎಂದು ನ್ಯಾಯಮೂರ್ತಿಗಳಾದ ದಿಲೀಪ್ ಮಿಶ್ರಾ ಮತ್ತು ಉದಯ್ ಲಲಿತ್ ಅವರು ಕರ್ನಾಟಕವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಕ್ಟೋಬರ್ 4ರೊಳಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಬೇಕು. ಅಕ್ಟೋಬರ್ 4 ಮತ್ತು 5ರಂದು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಿ, ನಾಳೆ ಸಂಜೆ 4ಗಂಟೆಯೊಳಗೆ ಮಂಡಳಿಯ ಪ್ರತಿನಿಧಿಗಳ ಮಾಹಿತಿ ನಮಗೆ ಕೊಡಿ, ಅಕ್ಟೋಬರ್ 6ರಂದು ವರದಿ ನೀಡಬೇಕು ಎಂದೂ ಕೇಂದ್ರಕ್ಕೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದೆ.

ಕರ್ನಾಟಕದ ಪರ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಟಿಪ್ಪಣಿಯನ್ನು ಕೋರ್ಟ್‍ಗೆ ಸಲ್ಲಿಸಿ, ಟಿಪ್ಪಣಿ ಬಿಟ್ಟು ಬೇರೆ ವಾದ ಮಾಡಲ್ಲ ಎಂದು ಹೇಳಿದರು.

ಕಾವೇರಿ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ. ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ವಾದ ಮಂಡನೆಯಿಂದ ಹಿಂದಕ್ಕೆ ಸರಿದಿದ್ದಾರೆ.

ಕರ್ನಾಟಕ ಸರ್ಕಾರ ಪದೇ ಪದೇ ಕೋರ್ಟ್ ಆದೇಶ ಉಲ್ಲಂಘನೆ ಮಾಡುತ್ತಿದೆ, ಹೀಗಾಗಿ ವಾದ ಮಂಡನೆಯಿಂದ ಹಿಂದೆ ಸರಿಯುತ್ತಿ ದ್ದೇನೆ ಎಂದು ಅವರು ಹೇಳಿದ್ದಾರೆ.ಈ ಕುರಿತು ಪತ್ರವನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕೊಟ್ಟಿದ್ದೇನೆ ಎಂದು ಅವರು ಹೇಳಿದ್ದಾರೆ.

ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿದೆ. ಇನ್ನು ಕೇಂದ್ರ ಸರ್ಕಾರ ಸಹ ಮಂಗಳವಾರದೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವದಾಗಿ ಉತ್ತರ ನೀಡಿದೆ