ಸಿದ್ದಾಪುರ, ಜೂ. 5: ಬಿ.ಜೆ.ಪಿ. ಮುಕ್ತ ರಾಜ್ಯವನ್ನಾಗಿ ಕರ್ನಾಟಕವನ್ನು ಮಾಡಬೇಕೆಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಕರೆ ನೀಡಿದರು.
ಸಮೀಪದ ಕೊಂಡಂಗೇರಿ ವಲಯ ಕಾಂಗ್ರೆಸ್ ಪಕ್ಷದ ವತಿಯಿಂದ ಇತ್ತೀಚೆಗೆ ಜಿ.ಪಂ.ನಲ್ಲಿ ಜಯಸಾಧಿಸಿದ ಸರಿತಾ ಪೂಣಚ್ಚ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಬಿ.ಜೆ.ಪಿ.ಯವರು ರಾಜ್ಯ ಹಾಗೂ ಜಿಲ್ಲೆಯನ್ನು ಕಾಂಗ್ರೆಸ್ ಮುಕ್ತ ಮಾಡುತ್ತೇವೆಂದು ಹೇಳಿಕೆ ನೀಡುತ್ತಿದ್ದು, ಅದು ಬಿ.ಜೆ.ಪಿ.ಯವರ ಭ್ರಮೆಯಾಗಿದೆ. ಕಾಂಗ್ರೆಸ್ ಪಕ್ಷವನ್ನು ಕಾರ್ಯಕರ್ತರು ಬೆಳೆಸಬೇಕು ಎಂದು ಕರೆ ನೀಡಿದ ಅವರು, ತಾನು ಕಾಂಗ್ರೆಸ್ ಪಕ್ಷಕ್ಕೆ ಸಲಹೆ ನೀಡುವ ಸಂದರ್ಭ ಹಾಗೂ ಲೋಪದೋಷಗಳನ್ನು ತಿದ್ದಲು ತಿಳಿಸಿದ ಸಂದರ್ಭ ಕೆಲವು ಕಾಂಗ್ರೆಸ್ ಮುಖಂಡರು ತನ್ನನ್ನು ಪಕ್ಷ ವಿಚಾರದಲ್ಲಿ ಮೂಗು ತೋರಿಸಬಾರ ದೆಂದು ಹೇಳಿಕೆ ನೀಡುತ್ತಿದ್ದು, ತನ್ನನ್ನು ಪಕ್ಷದ ಶತ್ರುವಿನಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಇತ್ತೀಚೆಗೆ ನಡೆದ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಕೆಲವು ಕಾಂಗ್ರೆಸಿಗರು ಬಿ.ಜೆ.ಪಿ.ಗೆ ಬೆಂಬಲ ನೀಡಿ, ಜಿ.ಪಂ.ನಲ್ಲಿ ಬಿ.ಜೆ.ಪಿ. ಅಧಿಕಾರಕ್ಕೆ ಬರಲು ಪರೋಕ್ಷ ಸಹಕಾರ ನೀಡಿದ್ದಾರೆ. ಕಾಂಗ್ರೆಸ್‍ನಲ್ಲಿ ಕಮಲ ಕಾಂಗ್ರೆಸ್ಸಿಗರಿದ್ದಾರೆ ಎಂದು ಆರೋಪಿಸಿದ ಅವರು, ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿ.ಜೆ.ಪಿ.ಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷವು ಶಕ್ತಿಯುತವಾಗಿ ಕೆಲಸ ಮಾಡಬೇಕೆಂದು ಕಿವಿಮಾತು ಹೇಳಿದರು.
ಮಾಜಿ ಶಾಸಕ ಹೆಚ್.ಡಿ. ಬಸವರಾಜು ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲು ಯಾವ ಪಕ್ಷದಿಂದಲೂ ಸಾಧ್ಯವಿಲ್ಲ. ದೇಶಪ್ರೇಮದ ಬಗ್ಗೆ ಬಿ.ಜೆ.ಪಿ. ಬೊಗಳೆ ಬಿಡುತ್ತಿದ್ದು, ಬಿ.ಜೆ.ಪಿ ಜಾತ್ಯತೀತ ಹೆಸರಿನಲ್ಲಿ ಮತ ಪಡೆಯಲು ಸುಳ್ಳಿನ ಕಂತೆ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಮುಖಂಡ ಪಿ.ಸಿ. ಹಸೈನಾರ್ ಹಾಜಿ ಮಾತನಾಡಿ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಮೂಲೆಗುಂಪು ಮಾಡಬೇಕು ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಪಂ. ಸದಸ್ಯೆ ಸರಿತಾ ಪೂಣಚ್ಚ, ಸಿದ್ದಾಪುರ ಜಿ.ಪಂ. ಕ್ಷೇತ್ರವು ಭೌಗೋಳಿಕವಾಗಿ ದೊಡ್ಡ ಕ್ಷೇತ್ರವಾಗಿದ್ದು, ಎಲ್ಲಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೂಲಭೂತ ಸಮಸ್ಯೆಗಳಿಗೆ ಹಾಗೂ ಅಭಿವೃದ್ಧಿಗೆ ಪ್ರಮಾಣಿಕವಾಗಿ ಶ್ರಮಿಸುವದಾಗಿ ಭರವಸೆ ನೀಡಿದರು.
ಸಮಾರೋಪದಲ್ಲಿ ಜಿ.ಪಂ. ಸದಸ್ಯೆ ಲೀಲಾವತಿ, ತಾ.ಪಂ. ಸದಸ್ಯೆ ಕಾವೇರಮ್ಮ, ಗ್ರಾ.ಪಂ. ಅಧ್ಯಕ್ಷರಾದ ಎ.ಎಂ. ಸಾದಲಿ, ಹಂಸ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ. ಸಲಾಂ, ಅಲ್ಪಸಂಖ್ಯಾತ ಘಟಕದ ಬ್ಲಾಕ್ ಅಧ್ಯಕ್ಷ ಇಜಾಸ್ ಅಹ್ಮದ್, ಮಾಜಿ ಜಿ.ಪಂ. ಸದಸ್ಯ ಪಾಪು ಸಣ್ಣಯ್ಯ, ಮುಖಂಡರಾದ ನಾಪಂಡ ಮುತ್ತಪ್ಪ, ವಲಯ ಕಾಂಗ್ರೆಸ್ ಅಧ್ಯಕ್ಷ ಯಾಹ, ಪೋಕುಟ್ಟಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು. - ವಾಸು ಆಚಾರ್ಯ