ಕೂಡಿಗೆ, ಸೆ. 26: ಕೂಡಿಗೆಯಲ್ಲಿರುವ ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2015-16ನೇ ಸಾಲಿನಲ್ಲಿ ವಿವಿಧ ಯೋಜನೆ ಗಳ ಮೂಲಕ ರೈತರಿಗೆ ವಿತರಿಸಿದ ವಿವಿಧ ಸಾಲಗಳ ಮರುಪಾವತಿಯ ಮೂಲಕ ಪ್ರಗತಿಯತ್ತ ಸಾಗಿ ಪ್ರಸಕ್ತ ಸಾಲಿನಲ್ಲಿ ರೂ. 10.62 ಲಕ್ಷ ಲಾಭಾಂಶ ಗಳಿಸಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ತಿಳಿಸಿದರು. ವಾರ್ಷಿಕ ಮಹಾಸಭೆ ಯಲ್ಲಿ ಮಾತನಾಡಿದ ಅವರು 4218 ಸದಸ್ಯರನ್ನು ಹೊಂದಿರುವ ಸಂಘವು ರೂ. 949.38 ಲಕ್ಷ ಸಾಲವನ್ನು ವಿತರಿಸಿದೆ. ವ್ಯವಹಾರ ಅಭಿವೃದ್ಧಿ ಸಾಲವಾಗಿ ರೂ. 11 ಲಕ್ಷ 50 ಸಾವಿರ, ಮಧ್ಯಂತರ ಅವಧಿಯ ಕೃಷಿ ಸಾಲ ರೂ. 18 ಲಕ್ಷದ 87 ಸಾವಿರ, ಚಿನ್ನಾಭರಣ ಸಾಲ ರೂ. 1 ಕೋಟಿ 87 ಲಕ್ಷ, ಕೆಸಿಸಿ ಸಾಲ ರೂ. 4 ಕೋಟಿ 92 ಲಕ್ಷದ 20 ಸಾವಿರ, ಪಿಗ್ಮಿ ಸಾಲ (ಓ.ಡಿ) ರೂ. 1.41 ಕೋಟಿ ಲಕ್ಷ, ಸ್ವಸಹಾಯ ಗುಂಪುಗಳಿಗೆ ರೂ. 11.57 ಲಕ್ಷ, ಜಾಮೀನು ಸಾಲವಾಗಿ 6.95 ಲಕ್ಷ, ಇತರೆ ಠೇವಣಿಗಳ ಮೇಲೆ 5,01,45,000 ಸಾಲ ನೀಡಿ ರೈತರು ಗಳಿಗೆ ಹಾಗೂ ಈ ವ್ಯಾಪ್ತಿಯ ಸಾರ್ವಜನಿಕರಿಗೆ ಸಹಕರಿಸಿ ವ್ಯವಹರಿಸಿ, ಸಹಕಾರ ಸಂಘವನ್ನು ಲಾಭದತ್ತ ಕೊಂಡೊಯ್ಯಲು ಪ್ರಯತ್ನಿಸಲಾಯಿತು ಎಂದು ಹೇಳಿದರು. ರೈತರ ಜಮೀನಿನ ಅನುಗುಣಕ್ಕೆ ತಕ್ಕಂತೆ ವಿವಿಧ ರಾಸಾಯನಿಕ ಗೊಬ್ಬರ ಹಾಗೂ ಜೋಳ, ಬಿತ್ತನೆ ಭತ್ತದ ದಾಸ್ತಾನು ಇಟ್ಟು ಸಮಯಕ್ಕೆ ಸರಿಯಾಗಿ ವಿತರಣೆ ಮಾಡುವ ಮೂಲಕ ಸಹಕಾರಿಯಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಸಂಘದ ಪ್ರಗತಿಯ ವಿಚಾರವಾಗಿ ವಿವಿಧ ಚರ್ಚೆಗಳು ನಡೆದವು. ಈ ಸಂದರ್ಭ ಸಹಕಾರ ಸಂಘದ ಉಪಾಧ್ಯಕ್ಷ ಪ್ರಕಾಶ್ ಸೇರಿದಂತೆ ಸಮಿತಿಯ ನಿರ್ದೇಶಕರು ಹಾಜರಿದ್ದರು. ಇದೇ ವೇಳೆ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಅತಿಹೆಚ್ಚು ಅಂಕ ಗಳಿಸಿದ ಈ ವ್ಯಾಪ್ತಿಗೊಳಪಡುವ ರೈತರ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಕೆ.ಕೆ. ಬೋಗಪ್ಪ ಸ್ವಾಗತಿಸಿ, ಪಾರ್ವತಿ ರಾಮೇಗೌಡ ವಂದಿಸಿದರು.