ಮಡಿಕೇರಿ, ನ. 30: ಭತ್ತದ ಕೃಷಿಗೆ ರೃತರನ್ನು ಉತ್ತೇಜಿಸಲು ರೈತರಿಗೆ ಬೆಳೆಯ ಖರ್ಚು ಕಡಿಮೆಯಾಗಲು ಅನುಕೂಲವಾಗುವಂತೆ ಬಾಡಿಗೆ ಆಧಾರದಲ್ಲಿ ಕೃಷಿ ಯಂತ್ರೋಪಕರಣಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಂಡಿದೆ. ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಅಮ್ಮತ್ತಿ, ಕೊಡ್ಲಿಪೇಟೆ ಹಾಗೂ ಚೇರಂಬಾಣೆಯಲ್ಲಿ ಇಂತಹ ಮೂರು ಕೇಂದ್ರ ಪ್ರಾರಂಭಿಸಲಾಗಿದೆ. ಮುಂದಿನ ದಿನದಲ್ಲಿ ಜಿಲ್ಲೆಯಲ್ಲಿ ಇನ್ನೂ ಏಳೆಂಟು ಈ ರೀತಿಯ ಕೇಂದ್ರಗಳನ್ನು ಪ್ರಾರಂಭಿಸಲಾಗುವದು ಎಂದು ರಾಜ್ಯ ಕೃಷಿ ಸಚಿವ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾಡಿದ ಪ್ರಸ್ತಾಪಕ್ಕೆ ಸಚಿವರು ಉತ್ತರ ನೀಡಿದರು.

ವಿಶೇಷವಾಗಿ ಕೊಡಗು ಜಿಲ್ಲೆಯ ವಿಚಾರದ ಕುರಿತು ಪ್ರಸ್ತಾಪಿಸಿದ ವೀಣಾ ಜಿಲ್ಲೆಯಲ್ಲಿ ಶೇ. 50ಕ್ಕೂ ಅಧಿಕ ಗದ್ದೆಗಳು ಪಾಳು ಬಿದ್ದಿವೆ. ಅಧಿಕಾರಿಗಳ ಮಾಹಿತಿಯನ್ನು ನಂಬಲಾಗದು. ಕಾರ್ಮಿಕರ ಸಮಸ್ಯೆ, ಹೆಚ್ಚು ಖರ್ಚು ಮತ್ತಿತರ ಕಾರಣದಿಂದ ಗದ್ದೆಗಳನ್ನು ರೈತರು ಪಾಳು ಬಿಟ್ಟಿದ್ದಾರೆ. ರೈತರಿಗೆ ಸೂಕ್ತ ಉತ್ತೇಜನ ನೀಡಿದರೆ ಖಂಡಿತವಾಗಿಯೂ ಕೊಡಗಿನ ರೈತರು ಭತ್ತದ ಬೆಳೆಯತ್ತ ಆಸಕ್ತಿ ವಹಿಸಲಿದ್ದಾರೆ. ಹೆಕ್ಟೇರ್‍ಗೆ ಇಂತಿಷ್ಟು ಎಂದು ಪ್ರೋತ್ಸಾಹ ಧನ ನೀಡಬೇಕು. ಪ್ರಸ್ತುತ ನೀರಿನ ಕೊರತೆಯೂ ಎದುರಾಗುತ್ತಿದೆ. ಇದಕ್ಕೂ ಸೂಕ್ತ ವ್ಯವಸ್ಥೆ ಮಾಡಬೇಕು. ಬಹುತೇಕವಾಗಿ ಜಿಲ್ಲೆಯಲ್ಲಿ ದೀರ್ಘಾವದಿ ತಳಿಯ ಭತ್ತವನ್ನೇ ಬೆಳೆಯಲಾಗುತ್ತದೆ. ಜೂನ್ ತಿಂಗಳಿನಿಂದ ಡಿಸೆಂಬರ್

(ಮೊದಲ ಪುಟದಿಂದ) ತನಕವೂ ಭತ್ತದ ಕೃಷಿ ಇರುವದರಿಂದ ಗದ್ದೆಗಳಲ್ಲಿ ನೀರು ಶೇಖರಣೆಯಾಗಿ ಅಂತರ್‍ಜಲದ ಮಟ್ಟವೂ ಹೆಚ್ಚಾಗುತ್ತದೆ. ಕೊಡಗಿನ ನೀರನ್ನು ನೆರೆಯ ಜಿಲ್ಲೆಗಳೂ ಅವಲಂಭಿಸಿವೆ. ಅಂತರ್‍ಜಲ ಹೆಚ್ಚಾದರೆ ಮೈಸೂರು, ಮಂಡ್ಯ, ಬೆಂಗಳೂರಿನ ಜನತೆಗೂ ಉಪಕಾರವಾಗಲಿದೆ. ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವಂತೆ ಅವರು ಮನವಿ ಮಾಡಿದರು.

ಇದಕ್ಕೆ ಉತ್ತರಿಸಿದ ಕೃಷಿ ಸಚಿವ ಭೈರೇಗೌಡ ಅವರು ಮಲೆನಾಡು ಹಾಗೂ ಕರಾವಳಿ ಪ್ರದೇಶದಲ್ಲಿ ಈ ಪರಿಸ್ಥಿತಿ ಇದೆ. ಇಲ್ಲಿ ಭತ್ತ ಬೆಳೆಯಲು ಖರ್ಚು ಹೆಚ್ಚಾಗುತ್ತದೆ. ವಾತಾವರಣ-ಭೌಗೋಳಿಕ ವಿಚಾರವೂ ವಿಭಿನ್ನ ಕೂಲಿಕಾರ್ಮಿಕರ ಸಮಸ್ಯೆಯೂ ಇದೆ. ಈ ವಿಚಾರವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಈ ಪ್ರದೇಶಗಳಿಗೆ ಹೆಚ್ಚು ಇಳುವರಿ ನೀಡುವ ತಳಿಗಳನ್ನು ನೀಡುವ ಪ್ರಯತ್ನ ಮಾಡಲಾಗುತ್ತದೆ. ಇದರೊಂದಿಗೆ ಖರ್ಚು ಕಡಿಮೆ ಮಾಡಲು ಯಂತ್ರೋಪಕರಣವನ್ನು ಬಾಡಿಗೆಗೆ ನೀಡಲು ಗಮನ ಹರಿಸಲಾಗಿದ್ದು, ಜನತೆಗೆ ತಂತ್ರಜ್ಞಾನ ಪರಿಚಯಿಸಲು ಹಲವಾರು ಕಡೆಗಳಲ್ಲಿ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಕೊಡಗಿನಲ್ಲಿ ಪ್ರಸ್ತುತ ಯಂತ್ರ ಒದಗಿಸಲು ಮೂರು ಕೇಂದ್ರಗಳಿದ್ದು, ಇನ್ನೂ ಏಳೆಂಟು ಕೇಂದ್ರ ತೆರೆಯಲಾಗುವದು. ಈ ನಿಟ್ಟಿನಲ್ಲಿ ಕೆಲವು ಸಂಘ-ಸಂಸ್ಥೆಗಳೊಂದಿಗೆ ಈಗಾಗಲೇ ಚರ್ಚೆಯನ್ನೂ ನಡೆಸಲಾಗಿದೆ ಎಂದು ಸದನದ ಗಮನಕ್ಕೆ ತಂದರು.