ಮಡಿಕೇರಿ, ಜು. 9: ವಿದ್ಯಾರ್ಥಿ ಜೀವನ ಬದುಕಿನ ಮಹತ್ವದ ಘಟ್ಟ ವಾಗಿದ್ದು, ವಿದ್ಯಾರ್ಥಿ ದಿಸೆಯಲ್ಲಿಯೇ ಉತ್ತಮ ಜೀವನವನ್ನು ರೂಪಿಸಬಲ್ಲ ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಬೇಕೆಂದು ಅತಿಥಿ ಗಣ್ಯರು ಕರೆ ನೀಡಿದರು.

ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆಶ್ರಯ ದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ನಾಡೋಜ ದೇ. ಜವರೇಗೌಡ ಅವರ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಲಾಗಿದ್ದ ನುಡಿ ನಮನ ಕಾರ್ಯಕ್ರಮವನ್ನು ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್.ಲೋಕೇಶ್ ಸಾಗರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉತ್ತಮ ಸಂವಹನ, ನಡೆ, ನುಡಿ ಇದ್ದರೆ ಉತ್ತಮ ಸಂಬಂಧ ದೊಂದಿಗೆ ಉತ್ತಮ ಸಮಾಜ ನಿರ್ಮಾಣವಾಗಲಿದೆಯೆಂದು ಹೇಳಿದರು. ಬದುಕಿನಲ್ಲಿ ಹೆಸರು, ಕೀರ್ತಿ ಗಳಿಸಿದರೆ ಸತ್ತರೂ ಬದುಕಿದ್ದಂತೆಯೇ, ಅಂತಹವರ ಸಾಲಿಗೆ ದೇ. ಜವರೇಗೌಡರು ಸೇರುತ್ತಾರೆ. ದೇ.ಜೇ.ಗೌ. ಕ್ರಾಂತಿಕಾರಿ ಸಾಹಿತಿಗಳಾಗಿದ್ದರೆಂದು ಹೇಳಿದರು. ವಿದ್ಯಾರ್ಥಿಗಳು ವಿದ್ಯೆಯೊಂದಿಗೆ ಇನ್ನಿತರ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ಸಮಾಜಕ್ಕೆ ಕೊಡುಗೆ ನೀಡಬೇಕು, ಸಾಹಿತ್ಯ ರಚನೆಗೆ ಉತ್ತಮ ಅವಕಾಶವಿದ್ದು, ಬಳಸಿಕೊಳ್ಳ ಬೇಕೆಂದರು. ಮೊಬೈಲ್ ಕ್ರಾಂತಿ ಯಿಂದಾಗಿ ಸಂಬಂಧಗಳು, ಭಾವನೆಗಳು ಕಡಿಮೆಯಾಗುತ್ತಿವೆ ಎಂದು ವಿಷಾದಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಮೂರ್ನಾಡು ಪದವಿ ಕಾಲೇಜು ಉಪನ್ಯಾಸಕ ಕಿಗ್ಗಾಲು ಹರೀಶ್ ಅವರು ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ವಿವಿಧ ಮಜಲುಗಳಲ್ಲಿ ಬೆಳೆದು ಬಂದಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಕೂಡ ವಿವಿಧ ಮಜಲುಗಳಲ್ಲಿದ್ದು, ಹಳಗನ್ನಡದಿಂದ ಆಧುನಿಕ ಕನ್ನಡದವರೆಗೆ ಛಾಪು ಮೂಡಿಸಿದೆ. ಆದರೆ, ಎಲ್ಲಾ ಮಜಲುಗಳಲ್ಲಿ ಕೈಯ್ಯಾಡಿಸಿದವರು ವಿರಳ. ಆದರೆ, ದೇ. ಜವರೇಗೌಡರು ಎಲ್ಲಾ ಮಜಲುಗಳಲ್ಲೂ ಕೈಯ್ಯಾಡಿಸಿದ್ದು, 70ವರ್ಷಗಳಿಂದ ಮೂರು ಹಂತಗಳಲ್ಲಿ ಬರವಣಿಗೆಯ ಮೂಲಕ ಆಡಳಿತದ ವಿರುದ್ಧ ಬಿಸಿ ಮುಟ್ಟಿಸುತ್ತ ಕನ್ನಡವನ್ನು ಕಾಯುವ ಕೆಲಸ ಮಾಡಿದ್ದಾರೆಂದು ಹೇಳಿದರು. ಕನ್ನಡ ಸಂಸ್ಕøತಿ ಒಂದು ಜೀವನ ಕ್ರಮವಾಗಿದ್ದು, ಗೌರವವನ್ನು ತಂದುಕೊಡುತ್ತದೆ. ವಿದ್ಯಾರ್ಥಿಗಳು ಇಂತಹ ಹಿರಿಯ ಸಾಹಿತಿಗಳ ಪುಸ್ತಕಗಳನ್ನು ಓದುವ ಪ್ರಯತ್ನ ಮಾಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಕುಡೆಕಲ್ ಸಂತೋಷ್ ಮಾತನಾಡಿ, ವಿದ್ಯಾರ್ಥಿ ಮನಸುಗಳು ಅರಿತುಕೊಳ್ಳುವ, ಜ್ಞಾನವನ್ನು ಅರ್ಜನೆ ಮಾಡಿಕೊಳ್ಳುವ, ಎಲ್ಲವನ್ನೂ ಅರ್ಥೈಸಿಕೊಳ್ಳುವ ಕಾಲಘಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುವದಾಗಿ ಹೇಳಿದರು. ಗುರುಗಳು ತೋರಿದ ಮಾರ್ಗವನ್ನು ಅನುಸರಿಸಿಕೊಂಡು ಹೋಗಬೇಕೆಂದು ಹೇಳಿದ ಅವರು, ಪತ್ರಿಕೆಗಳಿಂದ ಹಿಡಿದು ಉಪಯುಕ್ತ ಪುಸ್ತಕಗಳನ್ನು ಓದುವ ಹವ್ಯಾಸದೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು. ವೇದಿಕೆಯಲ್ಲಿ ಉಪನ್ಯಾಸಕಿ ನಮಿತಾ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಸಾವಿಗೀಡಾದ ಡಿವೈಎಸ್‍ಪಿ ಮಾದಪಂಡ ಗಣಪತಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಶಾಲಾ ವಿದ್ಯಾರ್ಥಿನಿಯರು ನಾಡ ಗೀತೆ ಹಾಡಿದರೆ, ವಿದ್ಯಾರ್ಥಿನಿ ಮಾನಸ ನಿರೂಪಿಸಿದರು. ರಂಜಿತಾ ಸ್ವಾಗತಿಸಿದರು. ಪರಿಷತ್‍ನ ಗೌರವ ಕಾರ್ಯದರ್ಶಿ ಪ್ರೊ.ದಯಾನಂದ ಕೂಡಕಂಡಿ ವಂದಿಸಿದರು.