ಕುಶಾಲನಗರ, ಡಿ 23: ಬಾಕಿಯಿರುವ ವಿದ್ಯುತ್ ಬಿಲ್ ರೂ. 1 ಕೋಟಿ 25 ಲಕ್ಷ ಬಡ್ಡಿ ವಿಧಿಸಿದ್ದು ಬರೋಬ್ಬರಿ ರೂ. 31 ಲಕ್ಷ...!ಇದು ಕುಶಾಲನಗರ ಪಟ್ಟಣ ಪಂಚಾಯಿಗೆ ಚೆಸ್ಕಾಂ ವಿಧಿಸಿದ ದಂಡದ ಮೊತ್ತ. ವಿದ್ಯುತ್ ಬಿಲ್ ಪಾವತಿಗೆ ವಿಳಂಬ ಮಾಡಿರುವದು ಕಾರಣವಾಗಿದೆ. ಇದು ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕೇಳಿಬಂದ ಮಾತು.

ಕುಶಾಲನಗರ ಪಟ್ಟಣ ವ್ಯಾಪ್ತಿಯ ಕುಡಿಯುವ ನೀರಿನ ಘಟಕಗಳ ವಿದ್ಯುತ್ ಬಿಲ್ ಪಾವತಿಸಲು ವರ್ಷದ ಹಿಂದೆ ಸರಕಾರದಿಂದ ರೂ.1 ಕೋಟಿ 25 ಲಕ್ಷ ವಿಶೇಷ ಅನುದಾನ ಬಿಡುಗಡೆಗೊಂಡರೂ ಅದನ್ನು ಪಾವತಿಸುವಲ್ಲಿ ಪಂಚಾಯಿತಿ ಆಡಳಿತ ಮಂಡಳಿ ವಿಳಂಬ ಮಾಡಿರುವದೇ ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ. ವಿದ್ಯುತ್ ಬಾಕಿ ಬಿಲ್ ಅನ್ನು ಪಾವತಿಸಲು ಸರಕಾರ ಹಣ ಬಿಡುಗಡೆ ಮಾಡಿದರೂ ಅದನ್ನು ಪಾವತಿಸಲು ಆಡಳಿತ ಮಂಡಳಿ ಅನುಮತಿ ನೀಡದೆ ಬದಲಿ ಕಾಮಗಾರಿಗಳಿಗೆ ಬಳಸಲು ಆಡಳಿತ ಮಂಡಳಿ ಸದಸ್ಯರು ನಿರ್ಣಯ ಕೈಗೊಂಡ ಹಿನ್ನಲೆಯಲ್ಲಿ ಬಾಕಿ ಉಳಿದ ಬಿಲ್ ಮೊತ್ತಕ್ಕೆ ಚೆಸ್ಕಾಂ ರೂ. 31 ಲಕ್ಷ ಬಡ್ಡಿ ವಿಧಿಸಿದೆ.

ಈ ವಿಚಾರದ ಹಿನ್ನೆಲೆಯಲ್ಲಿ ಆಡಿಟ್ ಆಕ್ಷೇಪ ಸಲ್ಲಿಸಿದ್ದು ಪಂಚಾಯಿತಿಗೆ ಕಾರಣ ಕೇಳಿ ನೋಟೀಸ್ ನೀಡಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು. ವಿದ್ಯುತ್ ಬಿಲ್ ಬಾಕಿಯೊಂದಿಗೆ ಬಡ್ಡಿ ಹಣವನ್ನು ಪಾವತಿಸಲು ಯಾರು ಹೊಣೆ ಎಂಬದೇ ಇಲ್ಲಿನ ಪ್ರಶ್ನೆಯಾಗಿ ಉಳಿದಿದೆ.