ಕೂಡಿಗೆ, ಜೂ. 19: ಇಲ್ಲಿನ ಕೃಷಿ ಇಲಾಖೆಯ ವತಿಯಿಂದ ಜಿಲ್ಲಾ ಮಟ್ಟದ ರೈತ ಮಹಿಳೆಯರಿಗೆ ಆರು ದಿನಗಳ ವಿಶೇಷ ಕೃಷಿ ತರಬೇತಿ ಕಾರ್ಯಾಗಾರ ಕೂಡಿಗೆಯ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಆವರಣದಲ್ಲಿ ನೆರವೇರಿತು. ವಿಶೇಷ ತರಬೇತಿ ಕಾರ್ಯಾಗಾರವನ್ನು ಕೂಡಿಗೆಯ ಸಹಾಯಕ ಕೃಷಿ ನಿರ್ದೇಶಕಿ ಟಿ.ಎಂ. ಕೋಮಲ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ರೈತ ಮಹಿಳೆಯರು ಸಾವಯವ ಕೃಷಿಯಲ್ಲಿ ತೊಡಗಿಕೊಂಡು ತಮ್ಮ ಬಿಡುವಿನ ವೇಳೆಯಲ್ಲಿ ವಿವಿಧ ಉಪ ಕಸುಬುಗಳಲ್ಲಿ ತೊಡಗಿಸಿಕೊಳ್ಳಲು ವಿಶೇಷ ಕಾರ್ಯಾಗಾರ ಅನುಕೂಲವಾಗುವದು. ತಮ್ಮ ಸಂಸಾರಿಕ ಬದುಕನ್ನು ಸುಗಮವಾಗಿ ಸಾಗಿಸಲು ಇಂತಹ ತರಬೇತಿ ಸಹಕಾರಿಯಾಗುವದು ಎಂದರು.

ಬೆಂಗಳೂರಿನ ಡಾ. ಪ್ರಭಾಕರ್ ಸಾವಯವ ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು. ಗೋವಿಂದರಾಜ್ ದಾಸ್ ಸಮಗ್ರ ಕೃಷಿಯ ಬಗ್ಗೆ, ಮೈಸೂರಿನ ಹೊಂಬಯ್ಯ ಲಾಭದಾಯಕದತ್ತ ಭತ್ತದ ಬೇಸಾಯ, ಕೂಡಿಗೆಯ ಕೋಳಿ ಸಾಕಾಣಿಕಾ ಕೇಂದ್ರದ ಡಾ. ಶಿವಕುಮಾರ್ ಪಶುಪಾಲನೆ, ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಗೋಪಾಲ್ ‘ತೋಟಗಾರಿಕಾ ಬೆಳೆಗಳ ಬಗ್ಗೆ’, ಡಾ. ಸುನೀತ ‘ಔಷಧಿ ಸಸಿಗಳ’ ಬಗ್ಗೆ ಮಾಹಿತಿ ನೀಡಿದರು.

ಇದೇ ಸಂದರ್ಭ ಜೇನು ಕೃಷಿ ಹಾಗೂ ಮೈಸೂರು ಜಿಲ್ಲೆಯ ಪ್ರಗತಿ ಪರ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ, ಅಲ್ಲಿನ ಪ್ರಗತಿಗಳ ಬಗ್ಗೆ ಮಾಹಿತಿ ಪಡೆದರು.

ವಿಶೇಷ ತರಬೇತಿ ಕಾರ್ಯಾಗಾರದಲ್ಲಿ 30 ರೈತ ಮಹಿಳೆಯರು ಪಾಲ್ಗೊಂಡಿದ್ದರು. ಇವರುಗಳಿಗೆ ತರಬೇತಿ ಪ್ರಮಾಣ ಪತ್ರಗಳನ್ನು ಸಹಾಯಕ ಕೃಷಿ ನಿರ್ದೇಶಕ ಟಿ.ಎಂ. ಕೋಮಲ ನೀಡಿದರು.