ವೀರಾಜಪೇಟೆ, ಡಿ. 24: ಕೊಡಗು ಜಿಲ್ಲೆಯಾದ್ಯಂತ ಬಾಂಗ್ಲಾ ವಲಸಿಗರು ನೆಲೆಸಿದ್ದು, ಈ ವಲಸಿಗರನ್ನು ನಿಯಂತ್ರಣದಲ್ಲಿಡುವದು ಅಗತ್ಯ ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಹೇಳಿದರು.

ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಬಿಲ್ಡಿಂಗ್ ವರ್ಕರ್ಸ್ ಯೂನಿಯನ್‍ನ 10 ನೇ ವರ್ಷದ ವಾರ್ಷಿಕ ಮಹಾಸಭೆ ಉದ್ಘಾಟಿಸಿದ ಸಚಿನ್ ಕುಟ್ಟಯ್ಯ ಅವರು ಬಾಂಗ್ಲಾ ವಲಸಿಗರ ಬಗ್ಗೆ ಎಚ್ಚರ ವಹಿಸಬೇಕು. ಜಿಲ್ಲೆಯಾದ್ಯಂತ ತುಂಬಿಕೊಂಡಿರುವ ಅಸ್ಸಾಮಿನವರ ಬಗ್ಗೆಯು ಗಮನ ಹರಿಸಬೇಕು. ಅಸ್ಸಾಮಿ ಕಾರ್ಮಿಕರ ಹಾವಳಿಯಿಂದ ಸ್ಥಳೀಯ ಕಾರ್ಮಿಕರಿಗೆ ಜೀವನ ನಡೆಸಲು ತೊಂದರೆ ಎದುರಾಗಿರುವದರಿಂದ ಸ್ಥಳೀಯ ಕಾರ್ಮಿಕರಿಗೆ ಆದ್ಯತೆ ನೀಡುವಂತಾಗಬೇಕು. ಸ್ಥಳೀಯ ಕಾರ್ಮಿಕರುಗಳು ಸಂಘಟನೆಯ ಮೂಲಕ ಹೋರಾಟ ನಡೆಸಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀರಾಜಪೇಟೆ ಹಿರಿಯ ಕಾರ್ಮಿಕ ನಿರೀಕ್ಷಕ ಹೆಚ್.ಎನ್. ವನಜಾಕ್ಷಿ ಅವರು ಮಾತನಾಡಿ, ಕಟ್ಟಡ ಮತ್ತು ಇತರÉ ನಿರ್ಮಾಣ ಕಾರ್ಮಿಕರು ಕಟ್ಟಡ ಕುಸಿತದ ಅಪಘಾತದಿಂದ ಮೃತರಾದಲ್ಲಿ ಅವರ ಅವಲಂಬಿತರು ಕಾರ್ಮಿಕ ಕಲ್ಯಾಣ ಮಂಡಳಿಯಿಂದ ರೂ,50,000ಗಳ ಪರಿಹಾರ ಪಡೆಯಲು ಅರ್ಹರು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಲ್ಲಿ ರೂ, 10,000 ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ, ಸರ್ಕಾರಿ ಮತ್ತು ಸರ್ಕಾರದಿಂದ ಮಾನ್ಯತೆ ಪಡೆದ ಖಾಸಗಿ ಆಸ್ಪತ್ರೆಗಳಲ್ಲಿ ಒಳರೋಗಿ ಯಾಗಿ ಚಿಕಿತ್ಸೆ ಪಡೆದಲ್ಲಿ ರೂ. 400 ರಿಂದ 6 ಸಾವಿರದ ವರೆಗೂ ಧನ ಸಹಾಯ ಪಡೆಯಬಹುದು. ಕಾರ್ಮಿಕರು ಕೆಲಸ ಮಾಡುವ ಸಂದರ್ಭ, ಕೆಲಸದಿಂದ ಮನೆಗೆ ಹೋಗುತ್ತಿರುವಾಗ. ಕೆಲಸಕ್ಕೆ ಹೋಗುವ ಮಾರ್ಗದ ಮಧ್ಯೆ ಮರಣ ಹೊಂದಿದ್ದಲ್ಲಿ ಫಲಾನುಭವಿಗಳಿಗೆ ಅಪಘಾತ ಪರಿಹಾರವಾಗಿ ರೂ. 2,00.000ವನ್ನು ಪಡೆಯಬಹುದು ಎಂದು ವನಜಾಕ್ಷಿ ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬಿಲ್ಡಿಂಗ್ ವರ್ಕರ್ಸ್ ಯೂನಿಯನ್ ಅಧ್ಯಕ್ಷ ಸಿ.ಜಿ.ವರ್ಗೀಸ್ ಮಾತನಾಡಿ, ಈ ಹಿಂದೆ 2013 ರಿಂದ 15 ರವರೆಗೆ ಸುಮಾರು 48 ಕಾರ್ಮಿಕ ಫಲಾನುಭವಿಗಳಿಗೆ ಕಾರ್ಮಿಕ ಮಂಡಳಿಯಿಂದ ಸಹಾಯಧನ ದೊರಕಿಲ್ಲ. ಹಿಂದೆ ಇದ್ದ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡದಿರುವ ದರಿಂದ ಸವಲತ್ತುಗಳು ಕಾರ್ಮಿಕರಿಗೆ ಸರಿಯಾಗಿ ದೊರಕಿಲ್ಲ, ಈಗ 2016ರಲ್ಲಿ ಕರ್ತವ್ಯ ನಿಷ್ಠೆಯ ಅಧಿಕಾರಿ ಬಂದಿದ್ದು, ಕಾರ್ಮಿಕರಿಗೆ ಸಹಾಯಧನ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಪ್ರಯತ್ನಿಸುವದಾಗಿ ಹೇಳಿದರು.

ಯೂನಿಯನ್‍ನ ಕಾನೂನು ಸಲಹೆಗಾರ ಹಾಗೂ ವಕೀಲ ಟಿ.ಪಿ. ಕೃಷ್ಣ ಅವರು ಮಾತನಾಡಿ, ಕಟ್ಟಡ ಮಾಲೀಕರು ಹಾಗೂ ಕಾರ್ಮಿಕರುಗಳು ಹೊಂದಾಣಿಕೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿವರ್ಷ ಕಟ್ಟಡ ಹಾಗೂ ಇತರ ಕಾರ್ಮಿಕರಿಂದ ಕಲ್ಯಾಣ ಮಂಡಳಿಗೆ ರೂ,400 ಕೋಟಿ ನಿಧಿ ಸಂಗ್ರಹವಾಗುತ್ತದೆ. ಜಿಲ್ಲೆಯಲ್ಲಿ ಹಿಂದೆ ಇದ್ದ ಅಧಿಕಾರಿಗಳು ಕಾರ್ಮಿಕರು ಸಲ್ಲಿಸಿದ್ದ ಅರ್ಜಿಗಳನ್ನು ನಿರಂತರವಾಗಿ ನಿರ್ಲಕ್ಷಿಸುತ್ತಿದ್ದರಿಂದ ಕಾರ್ಮಿಕರಿಗೆ ಸರಕಾರದ ಸವಲತ್ತುಗಳು ತಡೆಯಾಗಿತ್ತು ಎಂದು ದೂರಿದರು.

ವೇದಿಕೆಯಲ್ಲಿ ಯೂನಿಯನ್‍ನ ಪ್ರಧಾನ ಕಾರ್ಯದರ್ಶಿ ಪಿ.ಕೆ.ಪವಿತ್ರನ್, ಖಜಾಂಚಿ ಪಿ.ಆರ್.ಮುರುಗೇಶ್, ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭ ಫಲಾನುಭವಿಗಳಿಗೆ ಗುರುತಿನ ಚೀಟಿ ವಿತರಿಸಲಾಯಿತು. ಸದಸ್ಯ ಕಿರಣ್ ಸ್ವಾಗತಿಸಿದರು. ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.