ನಾಪೋಕ್ಲು, ನ. 8: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆ ಅಳವಡಿಸಿ ಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಆಗ ಮಾತ್ರ ಉತ್ತಮ ಜ್ಞಾನದೊಂದಿಗೆ ಆರೋಗ್ಯವಂತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಇಲ್ಲಿನ ಪ್ರೌಢಶಾಲೆಯಲ್ಲಿ ಲಯನ್ಸ್‍ಕ್ಲಬ್ ಹಾಗೂ ಸಿವಿರಾಮನ್ ವಿಜ್ಞಾನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಉಚಿತ ನೇತ್ರ ಮತ್ತು ದಂತ ತಪಾಸಣಾ ಶಿಬಿರದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷರು ಹಾಗೂ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿರುವ ಕೊಂಬಂಡ ಗಣೇಶ್ ಹೇಳಿದರು. ಲಯನ್ಸ್ ಸಂಸ್ಥೆ ಇಂತಹ ನಿಸ್ವಾರ್ಥ ಸೇವೆಗಳನ್ನು ನೀಡುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಲಯನ್ಸ್ ಸಂಸ್ಥೆಯ ಪದಾಧಿಕಾರಿ ಕೊಂಡೀರ ಗಣೇಶ್‍ನಾಣಯ್ಯ ಪ್ರಾಸ್ತಾವಿಕ ಮಾತುಗಳನ್ನಾಡಿ ಕಾರ್ಯಕ್ರಮದ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಲಯನ್ಸ್ ಪದಾಧಿಕಾರಿ ಹಾಗೂ ದಂತವೈದ್ಯರೂ ಆಗಿರುವ ಡಾ. ಕೋಟೇರ ಪಂಚಮ್‍ತಿಮ್ಮಯ್ಯ, ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದ ನೇತ್ರ ತಜ್ಞ ರಮೇಶ್, ಹಲ್ಲು ಹಾಗೂ ಕಣ್ಣಿನ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ತಪಾಸಣೆ ನಡೆಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ವಿಜ್ಞಾನಿ ಹಾಗೂ ಲಯನ್ಸ್ ಸಂಸ್ಥೆಯ ಹಿರಿಯ ಪದಾಧಿಕಾರಿ ಆಗಿರುವ ಡಾ.ಬೊಪ್ಪಂಡ ಜಾಲಿ ಬೋಪಯ್ಯ, ಅಂಕುರ್ ಪಬ್ಲಿಕ್ ಶಾಲೆಯ ಮುಖ್ಯಸ್ಥೆ ಕೇಟೋಳಿರ ರತ್ನಾಚರ್ಮಣ, ಪ್ರೌಢಶಾಲೆಯ ಉಪಪ್ರಾಂಶುಪಾಲೆ ಬಡ್ಡೀರ ನಳಿನಿ, ಕೊಂಡೀರ ದಮಯಂತಿ ನಾಣಯ್ಯ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬಡ್ಡೀರ ನಳಿನಿ ಸ್ವಾಗತಿಸಿ ಸಹಶಿಕ್ಷಕ ಸದಾನಂದ ನಿರೂಪಿಸಿ, ಶಿಕ್ಷಕಿ ಉಷಾರಾಣಿ ವಂದಿಸಿದರು.