ಸೋಮವಾರಪೇಟೆ, ನ.26: ಸಂಘಟಿತ ಹಿಂದೂ ಸಮಾಜದ ನಿರ್ಮಾಣ ವಿಶ್ವ ಹಿಂದೂ ಪರಿಷತ್‍ನ ಧ್ಯೇಯವಾಗಿದ್ದು, ಇದಕ್ಕಾಗಿ ಸಂಘಟನೆ ಕಟಿ ಬದ್ದವಾಗಿದೆ. ಸಂಘಟನೆಯ ಬಲವರ್ಧನೆಗಾಗಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಭಜರಂಗದಳದ ರಾಜ್ಯ ಸಂಚಾಲಕ ಸೂರ್ಯನಾರಾಯಣ ರಾವ್ ಹೇಳಿದರು.

ಇಲ್ಲಿನ ವಿಶ್ವಹಿಂದೂ ಪರಿಷತ್ ವತಿಯಿಂದ ಪಟ್ಟಣದಲ್ಲಿ ಸದಸ್ಯತ್ವ ಅಭಿಯಾನ ನಡೆಸುತ್ತಿದ್ದ ಸಂದರ್ಭ ಪತ್ರಕರ್ತರೊಂದಿಗೆ ಅವರು ಮಾತನಾಡಿದರು. ಅಖಂಡ ಭಾರತದಲ್ಲಿ ಹಿಂದೂ ಸಮಾಜದ ಸಂಘಟನೆ ಆಗಬೇಕಾಗಿದೆ. ಅದಕ್ಕಾಗಿ ವಿಶ್ವ ಹಿಂದೂ ಪರಿಷತ್ ಪ್ರತಿಯೊಬ್ಬ ಹಿಂದೂವನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಅವರನ್ನು ಸದಸ್ಯರನ್ನಾಗಿಸುವ ಮೂಲಕ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸಲಾಗುತ್ತಿದೆ. ಈ ದೇಶದಲ್ಲಿ ಹಿಂದೂ ಸಂಸ್ಕøತಿ, ಆಚಾರ, ವಿಚಾರ ಉಳಿಸಿ ಬೆಳೆಸಬೇಕಾಗಿದೆ. ಅದಕ್ಕೆ ವಿಶ್ವ ಹಿಂದೂ ಪರಿಷತ್ ಕಟಿ ಬದ್ದವಾಗಿದೆ. ಆದ್ದರಿಂದ ಎಲ್ಲಾ ಹಿಂದೂ ಬಾಂಧವರು 20 ರೂ. ನೀಡುವ ಮೂಲಕ ಸದಸ್ಯತ್ವವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಈ ಸಂದರ್ಭ ಸೋಮವಾರಪೇಟೆ ತಾಲೂಕು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಬಿ.ಜೆ. ದೀಪಕ್, ಕಾರ್ಯದರ್ಶಿ ರತ್ನಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಯಣ್ಣ, ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ವ್ಯವಸಾಯ ಸಹಕಾರಿ ಬ್ಯಾಂಕ್ ನಿರ್ದೇಶಕಿ ರೂಪಸತೀಶ್, ಪ್ರಮುಖರುಗಳಾದ ಅಜಿತ್, ದರ್ಶನ್, ಸತೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.