ವೀರಾಜಪೇಟೆ, ಸೆ. 20: ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಂಭಂದಪಟ್ಟ ಇಲಾಖೆಗಳಿಗೆ ಅರ್ಜಿ ನೀಡುವಂತೆ ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಹೇಳಿದರು.

ಪಟ್ಟಣದ ಮಹಿಳಾ ಸಮಾಜದಲ್ಲಿ ಕಂದಾಯ ಇಲಾಖೆ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದ ಬೋಪಯ್ಯ ಅವರು ಜನ ಸಂಪರ್ಕ ಸಭೆಗಳಲ್ಲಿ ಅನುದಾನಗಳು ಸಿಗುತ್ತಿಲ್ಲ ಎಂದು ದೂರು ನೀಡುವದರ ಬದಲು ಸಂಬಂಧಿಸಿದ ಇಲಾಖೆಗಳಿಗೆ ಅರ್ಜಿ ನೀಡಿ ಕೆಲಸ ಕಾರ್ಯಗಳು ಆಗದಿದ್ದರೆ ಜನ ಸಂಪರ್ಕ ಸಭೆಗಳಲ್ಲಿ ದೂರು ನೀಡುವಂತೆ ಸಾರ್ವಜನಿಕರಿಗೆ ತಿಳುವಳಿಕೆ ನೀಡಿದರು.

ಸಭೆಯಲ್ಲಿ ಆಹಾರ ಹಾಗೂ ಲೋಕೋಪಯೋಗಿ, ಅಬಕಾರಿ ಇಲಾಖೆಗಳ ಬಗ್ಗೆ ಹೆಚ್ಚಿನ ದೂರುಗಳು ಕೇಳಿ ಬಂದವು. ಕೆದಮುಳ್ಳುರುವಿನ ರೋಹಿಣಿ ಮಾತನಾಡಿ, ಸರ್ಕಾರ ಎಲ್ಲಾ ಕಡು ಬಡವರಿಗೆ ಉಚಿತ 30 ಕೆ.ಜಿ ಅಕ್ಕಿ ನೀಡಲಾಗುವದು ಎಂದು ಘೋಷಣೆ ಮಾಡಿತ್ತು. ಇಂದು ದಿನವಿಡಿ ಕಾದು 3 ಕೆ.ಜಿ ಅಕ್ಕಿ ನೀಡುತ್ತಿದ್ದಾರೆ. ಅನಿಲ ಸಂಪರ್ಕ ಇರುವವರಿಗೆ ಸೀಮೆಎಣ್ಣೆ ವಿತರಣೆಯನ್ನು ನೀಷೇಧಿಸಿದೆ. ಪ್ರತಿಯೊಬ್ಬರ ಮನೆಯಲ್ಲೂ ಗ್ಯಾಸ್ ಇದೆ ಎಂದು ಹೇಳಿದಾಗ ಚರ್ಚೆ ನಡೆದು ಅಂತಿಮವಾಗಿ ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ತಲುಪಿಸುವಂತೆ ಶಾಸಕರು ತಹಶೀಲ್ದಾರ್ ಮಹದೇವಸ್ವಾಮಿಗೆ ಆದೇಶ ಮಾಡಿದರು.

ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೊಲ್ಲಿರ ಗೋಪಿ ಚಿಣ್ಣಪ್ಪ ಮಾತನಾಡಿ, ಅಮ್ಮತ್ತಿ ಹೊಸೂರು ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದೆ. ಚರಂಡಿಯಲ್ಲಿರುವ ಮಣ್ಣನ್ನು ರಸ್ತೆಯ ಬದಿಗೆ ಹಾಕಿರುವದರಿಂದ ಗುಂಡಿ ಬಿದ್ದಿದೆ. ಬೈಕ್‍ಗಳನ್ನು ಓಡಿಸಲು ಸಾದ್ಯವಿಲ್ಲ ಎಂದು ಸಭೆಗೆ ತಿಳಿಸಿದಾಗ ಕೂಡಲೆ ಸರಿ ಪಡಿಸುವಂತೆ ಪಿಡ್ಲೂಡಿ ಅಧಿಕಾರಿ ಸುರೇಶ್ ತಿಳಿಸಿದರು.

ಗ್ರಾಮ ಪಂಚಾಯಿತಿಗಳಿಂದ ವಿವಿಧ ಅಭಿವೃದ್ಧಿ ಕಾಮಾಗಾರಿಗಳಿಗೆ ಕ್ರೀಯಾಯೋಜನೆಗಳನ್ನು ತಯಾರಿಸಿ ಅನುಮೋದನೆಗಾಗಿ ತಾಲೂಕು ಪಂಚಾಯಿತಿಗೆ ಕಳುಹಿಸಿದರೆ ಒಂದು ತಿಂಗಳಾದರೂ ಕಡತಗಳು ಬರುವದಿಲ್ಲ ಎಂದು ಗೋಪಿಚಿಣ್ಣಪ್ಪ ಸಭೆಗೆ ತಿಳಿಸಿದಾಗ ವಿಳಂಬ ದೋರಣೆ ಅನುಸರಿಸುತ್ತಿರುವ ತಾಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಪಂಚಾಯಿತಿಯ ಪಿಡಿಒಗಳು ಖುದ್ದು ಕಡತಗಳನ್ನು ತರುವಂತೆ ಹೇಳಿದರು.

ಕೆದಮುಳ್ಳೂರು ಗ್ರಾಮ ಪಂಚಾಯಿತಿ ಪರಮೇಶ್ ಮಾತನಾಡಿ ಕೆದಮುಳ್ಳೂರು ತೆರಮೆಮೊಟ್ಟೆ ಭಾಗದಲ್ಲಿ ಕಡುಡಿಯುವ ನೀರಿನ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು. ಕೆದಮುಳ್ಳೂರು ಚೋಟು ಬಿದ್ದಪ್ಪ ಮಾತನಾಡಿ, ಗ್ರಾಮ ಸೇರಿದಂತೆ ಇತರ ಗ್ರಾಮದ ಪ್ರತಿ ಅಂಗಡಿಗಳಲ್ಲಿ ಸಾರಾಯಿ ಕ್ವಾರ್ಟರ್‍ಗಳು ರಾರಾಜಿಸುತ್ತಿವೆ. ಅಬಕಾರಿ ಇಲಾಖೆ ಕಂಡು ಕಾಣದ ರೀತಿಯಲ್ಲಿ ವರ್ತಿಸುತ್ತಿದೆ ಎಂದು ಹೇಳಿದರು. ಅಬಕಾರಿ ಇಲಾಖೆಯವರು ಬಂದಿದಾರ ಎಂದು ಶಾಸಕರು ಕೇಳಿದಾಗ ಗೈರಾಗಿರುವದನ್ನು ಕಂಡು ಕೂಡಲೆ ನೋಟಿಸ್ ನೀಡುವಂತೆ ತಿಳಿಸಿದರು.

ಹಿಂದುಳಿದ ವರ್ಗಗಳ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳ ಸೇರ್ಪಡೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಎಲ್ಲ ಕಾಲೇಜುಗಳಿಗೆ ಮಾಹಿತಿ ನೀಡಲಾಗಿದೆ. ತಾಲೂಕಿನಲ್ಲಿ 9 ಹಾಸ್ಟೇಲ್‍ಗಳಿದ್ದು ಕೇವಲ ಇಬ್ಬರು ಮಾತ್ರ ವಾರ್ಡನ್‍ಗಳಿದ್ದಾರೆ ಅದರಲ್ಲಿ ಒಬ್ಬರಿಗೆ ವರ್ಗಾವಣೆ ಆಗಿದ್ದು ಇಲ್ಲಿಂದ ತೆರಳುವ ತರಾತುರಿಲ್ಲಿದ್ದಾರೆ ಎಂದು ತಿಳಿಸಿದಾಗ ಎಷ್ಟೆ ಒತ್ತಡ ಬಂದರೂ ಯಾವದೇ ಕಾರಣಕ್ಕೂ ರಿಲೀವ್ ಮಾಡಬೇಡಿ ಎಂದು ಶಾಸಕರು ಹೇಳಿದರು. ಕೃಷಿ, ಆರೋಗ್ಯ, ಪಶು ಸಂಗೋಪನೆ ಸೇರಿದಂತೆ ಹಲವಾರು ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು. ಮೀನುಗಾರಿಕೆ, ಅಬಕಾರಿ, ಐಟಿಡಿಪಿ ಅಧಿಕಾರಿಗಳೂ ಸಭೆಗೆ ಗೈರಾದ ಕಾರಣ ನೋಟಿಸ್ ನೀಡುವಂತೆ ತಹಶಿಲ್ದಾರ್‍ಗೆ ತಿಳಿಸಿದರು.

ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮೀತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲಿ ಚಲನ್, ತಹಶೀಲ್ದಾರ್ ಮಹಾದೇವಸ್ವಾಮಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಫಡ್ನೇಕರ್ ಉಪಸ್ಥಿತರಿದ್ದರು.