ಕುಶಾಲನಗರ, ಜು. 16: ಡಿವೈಎಸ್ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರ ಪ್ರಕರಣವನ್ನು ಮುಚ್ಚಲು ಹುನ್ನಾರ ನಡೆಸುವದರೊಂದಿಗೆ ಕುಟುಂಬ ಸದಸ್ಯರಿಗೆ ಅನ್ಯಾಯ ಮಾಡಲು ಹೊರಟಿದೆ ಎಂದು ಪ್ರತಿಪಕ್ಷ ನಾಯಕರಾದ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರು ಶನಿವಾರ ರಂಗಸಮುದ್ರಕ್ಕೆ ಭೇಟಿ ನೀಡಿ ಗಣಪತಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗಣಪತಿ ಅವರು ಸಾವಿಗೂ ಮುನ್ನ ಮಾಧ್ಯಮಕ್ಕೆ ನೀಡಿದ ಹೇಳಿಕೆಯನ್ನು ಡೈಯಿಂಗ್ ಡಿಕ್ಲರೇಷನ್ ಎಂದು ಪರಿಗಣಿಸಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ ಎಂದು ಆಗ್ರಹಿಸಿದ್ದಾರೆ.

ಗಣಪತಿ ಅವರ ಪ್ರಕರಣಕ್ಕೆ ಸಂಬಂಧಿಸಿದ ಸಚಿವ ಜಾರ್ಜ್ ಹಾಗೂ ಇಬ್ಬರು ಪೊಲೀಸ್ ಹಿರಿಯ ಅಧಿಕಾರಿಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಗಣಪತಿ ಅವರ ಪತ್ನಿ ಮತ್ತು ಕುಟುಂಬಕ್ಕೆ ಸರಕಾರ ಅಪಮಾನ ಎಸಗಿದೆ. ಸಿಐಡಿ ಅಧಿಕಾರಿಗಳು ತಮ್ಮ ಪ್ರಾಥಮಿಕ ವರದಿಯಲ್ಲಿ ಜಾರ್ಜ್ ತಪ್ಪಿತಸ್ಥರೆಂದು ಪರಿಗಣಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದರೂ ಕೂಡ ಸರಕಾರ ತಮ್ಮ ಅಧಿಕಾರ ಬಳಸಿ ತಪ್ಪಿತಸ್ಥರ ಪರವಾಗಿ ನಿಂತಿದ್ದಾರೆ ಎಂದಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸಚಿವ ಜಾರ್ಜ್ ರಾಜೀನಾಮೆ ನೀಡುವವರೆಗೂ ಬಿಜೆಪಿಯಿಂದ ಸದನದಲ್ಲಿ ಆಹೋರಾತ್ರಿ ಧರಣಿ ನಡೆಯಲಿದೆ. ಸಚಿವ ಜಾರ್ಜ್ ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ನಡುವೆ ಕೊಂಡಿಯಾಗಿ ಕಾರ್ಯನಿರ್ವ ಹಿಸುತ್ತಿರುವ ಕಾರಣ ಅವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿರುವ ಜಗದೀಶ್ ಶೆಟ್ಟರ್, ದೆಹಲಿಗೆ ತÉರಳಿರುವ ರಾಜ್ಯ ಗೃಹ ಸಚಿವ ಪರಮೇಶ್ವರ್ ಪ್ರಕರಣದ ವಸ್ತು ಸ್ಥಿತಿಯನ್ನು ವರೀಷ್ಠರಿಗೆ ವಿವರಿಸಿ ನ್ಯಾಯ ಒದಗಿಸುವಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದರು. ಪ್ರಕರಣದ ಸಮಗ್ರ ತನಿಖೆಗೆ ಸಿಬಿಐ ತನಿಖೆಗೆ ಸೂಚನೆ ನೀಡಬೇಕಾಗಿದೆ ಎಂದರು.

ಸರಕಾರ ಗಣಪತಿ ಕುಟುಂಬಕ್ಕೆ ನ್ಯಾಯ ಒದಗಿಸುವ ತನಕ ಪ್ರತಿಪಕ್ಷಗಳು ತೀವ್ರ ಹೋರಾಟ

ನಡೆಸಲಿದೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಈ ಸಂದರ್ಭ ಕುಟುಂಬಕ್ಕೆ ಸಾಂತ್ವನ ಹೇಳಿ ಮಾತನಾಡಿದ ಮಾಜಿ ಗೃಹ ಸಚಿವ ಆರ್.ಅಶೋಕ್, ಸಿಓಡಿಯ ಪ್ರಾಥಮಿಕ ವರದಿಯನ್ನು ತಕ್ಷಣ ಬಹಿರಂಗಗೊಳಿಸಬೇಕಾಗಿದೆ. ಪ್ರಕರಣದ ಹಿನ್ನೆಲೆಯಲ್ಲಿ ಈಗಾಗಲೆ ವಿಧಾನಮಂಡಲದಲ್ಲಿ ಪ್ರತಿಪಕ್ಷಗಳಿಂದ ನ್ಯಾಯಕ್ಕಾಗಿ ಧರಣಿ ನಡೆಯುತ್ತಿದ್ದು, ಸರಕಾರ ಸ್ಪಂದಿಸದ ಹಿನ್ನೆಲೆಯಲ್ಲಿ ಸೋಮವಾರದಿಂದ ರಾಜಭವನದ ಬಾಗಿಲಿಗೆ ನ್ಯಾಯಕ್ಕಾಗಿ ತೆರಳಲಿದ್ದೇವೆ ಎಂದು ಅವರು ಹೇಳಿದರು. ಈ ಸಂದರ್ಭ ಶಾಸಕ ಸೋಮಣ್ಣ ಮತ್ತು ಜಿಲ್ಲೆಯ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ವಿಧಾನಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಇದ್ದರು.