ಮಡಿಕೇರಿ ಜು. 12: ತನ್ನ ಸಹೋದರ ದಿ,ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆಯೇ ಸಂಶಯಾಸ್ಪದ ಪ್ರಕರಣವಾಗಿದೆ ಎಂದು ಅವರ ಕಿರಿಯ ಸಹೋದರ ಎಂ.ಕೆ. ಮಾಚಯ್ಯ “ಶಕ್ತಿ” ಗೆ ನೀಡಿರುವ ಹೇಳಿಕೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಅದರ ವಿವರ ಈ ಕೆಳಗಿನಂತಿದೆ. ಘಟನೆಯ ದಿನದ ಚಿತ್ರಣವನ್ನು ಗಮನಿಸಿದಾಗ ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡರು ಎನ್ನುವದಕ್ಕಿಂತ ಅವರನ್ನು ಹತ್ಯೆ ಮಾಡಿರಬಹುದೇ ಎನ್ನುವ ಸಂಶಯ ಮೂಡುತ್ತದೆ. ಏಕೆಂದರೆ ವಿನಾಯಕ ಲಾಡ್ಜ್ ಕೊಠಡಿಗೆ ತೆರಳಿದಾಗ ಸ್ನಾನದ ಕೋಣೆಯಲ್ಲಿನ ‘ವೆಂಟಿಲೇಷನ್’ ಬಾಗಿಲು ಗಮನಿಸಿದಾಗ ಓರ್ವ ವ್ಯಕ್ತಿ ನುಸುಳುವಷ್ಟು ಜಾಗ ಕಂಡುಬರುತ್ತದೆ. ಅಲ್ಲದೆ ಕೊಠಡಿಯ ಕಿಟಕಿಯೂ ಕೂಡ ಒಳಗೆ ಯಾರಾದರೂ ನುಸುಳಿ ಬರಬಹುದಾದಷ್ಟು ಅಗಲವಿದೆ.

ಈ ಎಲ್ಲ ಬೆಳವಣಿಗೆ ಗಮನಿಸಿದಾಗ ಸಿ.ಐ.ಡಿ ತನಿಖೆ ನಿಷ್ಪ್ರಯೋಜಕ. ಈ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆಗೆ ಮೊರೆ ಹೋಗಲಾಗಿದೆ.

ನನ್ನ ತಂದೆಯನ್ನು ದುರ್ಘಟನೆಯ ದಿನ ಪೊಲೀಸ್ ಅಧಿಕಾರಿಗಳು ಅವಸರದಲ್ಲಿ ಸಂಪರ್ಕಿಸಿದಾಗ ಅವರ ತಕ್ಷಣದ ಉದ್ವೇಗದಿಂದ ಪೂರ್ವಾಪರ ಯೋಚಿಸದೆ ದಾಂಪತ್ಯ ವಿರಸದ ಬಗ್ಗೆ ಹೇಳಿಕೆ ನೀಡಿರಬಹುದು. ಆದರೆ, ಅದನ್ನೇ ದೂರು ಎಂದು ಪರಿವರ್ತಿಸಿ ಸ್ಥಳೀಯ ಪೊಲೀಸ್ ಅಧಿಕಾರಿಗಳು ಸಿ.ಐ.ಡಿಗೆ ಹಸ್ತಾಂತರಿಸಿದ್ದಾರೆ, ಆದರೆ, ಮೃತರ ಧರ್ಮಪತ್ನಿ ನೀಡಿದ ದೂರನ್ನು ತಿರಸ್ಕರಿಸಿರುವ ಪೊಲೀಸರು ಏಕಪಕ್ಷೀಯವಾಗಿ ಪ್ರಕರಣವನ್ನು ಮುಚ್ಚಿಹಾಕಲು, ತನಿಖೆಯ ದಾರಿ ತಪ್ಪಿಸಲು ಉನ್ನತ ಪ್ರಭಾವಕ್ಕೆ ಒಳಗಾಗಿ ತಿರುಚುವ ಪ್ರಯತ್ನ ಮಾಡಿದ್ದಾರೆ, ನನ್ನ ಮತ್ತೊಬ್ಬ ಸಹೋದರ ತಮ್ಮಯ್ಯ ಅವರು ಕೂಡ ಪೊಲೀಸ್ ಇಲಾಖೆಯಲ್ಲಿರುವದರಿಂದ ಪ್ರಭಾವಕ್ಕೆ ಒಳಗಾಗಿ ಹೇಳಿಕೆ ನೀಡಿರಬಹುದು. ಆದರೆ, ಸತ್ಯದ ಹೋರಾಟದಲಿ ್ಲ ನಾವು ಮುನ್ನಡಿಯಿಟ್ಟಿದ್ದು ಇದಕ್ಕೆ ನ್ಯಾಯಪರ ಸಾರ್ವಜನಿಕರ ಬೆಂಬಲ ಅಗತ್ಯವಿದೆ ಎಂದು ಮಾಚಯ್ಯ ನೇರ ನುಡಿಯಾಡಿದರು.

ನನ್ನ ಸಹೋದರ ಸಾಯುವ ಮುನ್ನ ಸ್ಥಳೀಯ ಚಾನಲ್ ಗೆ ನೀಡಿದ್ದ ಸಂದರ್ಶನದಲ್ಲಿ ತನಗೇನಾದರೂ ಅಪಾಯವುಂಟಾದರೆ ಅದಕ್ಕೆ ಕಾರಣಾರಾಗುವವರನ್ನು ಹೆಸರಿಸಿ ದ್ದರೂ ಈ ಸಂದರ್ಶನದ ವೀಡಿಯೋವನ್ನು ಸಿ.ಐ.ಡಿ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿ, ತಮ್ಮ ತನಿಖೆಯಲ್ಲಿ ಮರೆಮಾಚಿದ್ದು ಯಾವ ರೀತಿಯ ತನಿಖೆ ನಡೆಸುತ್ತಿದ್ದಾರೆ ಎಂಬದರ ಸ್ಪಷ್ಟ ದ್ಯೋತಕವಾಗಿದೆ. ಇದರಿಂದಾಗಿ ಸಿ,ಬಿ.ಐ. ತನಿಖೆ ಅನಿವಾರ್ಯ. ಈ ನಡುವೆ ನಮ್ಮ ಮೊಬೈಲ್ ಫೋನ್‍ಗಳನ್ನು ಕೂಡ ‘ಟ್ರಾಪ್’ ಮಾಡಲಾಗುತ್ತಿದೆ ಎನ್ನುವ ಸಂಶಯವಿದೆ ಎಂದು ಮಾಚಯ್ಯ ಆರೋಪಿಸಿದರು.

ಅಮ್ಮನ ಹೇಳಿಕೆಯಿಲ್ಲವಂತೆ!

ಈ ನಡುವೆ “ಶಕ್ತಿ”ಯೊಂದಿಗೆ ಮಾತನಾಡಿದ ಗಣಪತಿ ಅವರ ಪುತ್ರ ನೇಹಲ್ ದಿಕ್ಕು ತಪ್ಪಿದ ತನಿಖೆಗೆ ಸ್ಪ್ಪಷ್ಟ ನಿದರ್ಶನವೊಂದನ್ನು ನೀಡಿದ್ದಾರೆ. ಅವರ ಹೇಳಿಕೆ ಈ ಕೆಳಗಿನಂತಿದೆ

ದುರ್ಘಟನೆಯ ದಿನ ಮಡಿಕೇರಿಯ ಪೊಲೀಸ್ ಅಧಿಕಾರಿಗಳು ನನ್ನ ಅಮ್ಮನಿಂದ ಹೇಳಿಕೆ ಪಡೆದುಕೊಂಡಿದ್ದರು. ಅದರಲ್ಲಿ ನನ್ನ ತಂದೆಯ ಸಾವಿಗೆ ಕಾರಣವಾದ ದೌರ್ಜನ್ಯದ ಕುರಿತ ಅಮ್ಮ ಸ್ಪಷ್ಟ ಅಭಿಪ್ರಾಯ ನೀಡಿದ್ದರು. ಆದರೆ, ಇದೀಗ ಅಮ್ಮ ಹೇಳಿಕೆಯೇ ನೀಡಿಲ್ಲ ಎಂದು ಪೊಲೀಸ್ ಅಧಿಕಾರಿಗಳು ನುಣುಚಿಕೊಳ್ಳುತ್ತಿದ್ದಾರೆ. ಸಿ.ಐ.ಡಿ ಅಧಿಕಾರಿಗಳು ತಮಗೆ ಹೇಳಿಕೆ ಲಭ್ಯವಾಗಿಲ್ಲ ಎಂದು ಹೇಳಿರುವ ಕುರಿತು ನನಗೆ ಮಾಹಿತಿ ದೊರಕಿದೆ. ಉನ್ನತ ವಲಯದ ಪ್ರಭಾವವೇ ಇದಕ್ಕೆ ಕಾರಣವಿರಬಹುದು ಎಂದು ನೇಹಲ್ ವಿಷಾದ ವ್ಯಕ್ತಪಡಿಸಿದ್ದಾರೆ.