ಮಡಿಕೇರಿ, ಜೂ. 8: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ನಗರದ ಸುದರ್ಶನ ಅತಿಥಿ ಗೃಹದಲ್ಲಿ ಮಂಗಳವಾರ ಸಾರ್ವಜನಿಕರ ಕುಂದುಕೊರತೆ ಆಲಿಸಿದರು. ಗದ್ದಿಗೆ ಬಳಿ ವಾಸ ಮಾಡುವವರನ್ನು ತೆರವುಗೊಳಿಸಲು ಮುಂದಾಗ ಲಾಗಿದ್ದು, ಹಲವು ವರ್ಷಗಳಿಂದ ವಾಸ ಮಾಡಿಕೊಂಡು ಬಂದಿರುವ ಅಲ್ಲಿನ ನಿವಾಸಿಗಳನ್ನು ಒಕ್ಕಲೆಬ್ಬಿಸ ಬಾರದು ಎಂದು ಅಲ್ಲಿನ ನಿವಾಸಿಗಳು ಸಚಿವರಲ್ಲಿ ಕೋರಿದರು.
ಕೊಡ್ಲಿಪೇಟೆ ಭಾಗದಲ್ಲಿ ಪ್ರತಿನಿತ್ಯ ಮರಳು ದಂಧೆ ನಡೆಯುತ್ತಿದೆ. ರಾತ್ರಿ ವೇಳೆಯಲ್ಲಿ ಮರಳು ಲಾರಿಗಳ ಶಬ್ಧ ಕಿರಿಕಿರಿ ಹೆಚ್ಚಾಗಿದೆ. ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮರಳು ಲಾಬಿಯನ್ನು ತಡೆಯಬೇಕು. ಕೊಡ್ಲಿಪೇಟೆ ಭಾಗದಿಂದ ಹೊರ ಜಿಲ್ಲೆಗಳಿಗೆ ಮರಳು ಸಾಗಾಣಿಕೆಯಾಗುತ್ತಿದ್ದು, ಇದನ್ನು ಸ್ಥಗಿತಗೊಳಿಸಬೇಕು. ಹಾಗೆಯೇ ಸ್ಥಳೀಯರಿಗೆ ಮನೆ ನಿರ್ಮಾಣ ಹಾಗೂ ಶೌಚಾಲಯ ನಿರ್ಮಾಣಕ್ಕೆ ಮರಳು ಸಿಗುತ್ತಿಲ್ಲ. ಈ ಸಂಬಂಧ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ರೈತರೊಬ್ಬರು ಸಚಿವರಲ್ಲಿ ಮನವಿ ಮಾಡಿದರು. ತೋಟದಲ್ಲಿ ಮನೆ ನಿರ್ಮಾಣಕ್ಕೆ ಭೂ ಪರಿವರ್ತನೆ ಮಾಡಿಕೊಡುತ್ತಿಲ್ಲ. ಒಂದು ವರ್ಷದಿಂದ ಕಡತ ಬಾಕಿ ಇದೆ ಎಂದು ಸಾರ್ವಜನಿಕ ರೊಬ್ಬರೂ ಅವಲತ್ತುಕೊಂಡರು. ಮಡಿಕೇರಿಯ ತಾಲೂಕು ಕಚೇರಿ ಹೊರಭಾಗದಲ್ಲಿ ಪತ್ರ ಬರೆಯಲು ಅವಕಾಶ ಮಾಡಿ ಕೊಡಬೇಕು ಎಂದು ಮಹಿಳೆ ಯೊಬ್ಬರು ಕೇಳಿಕೊಂಡರು. ಹೀಗೆ ಹಲವು ಸಮಸ್ಯೆಗಳ ಬಗ್ಗೆ ಅರ್ಜಿಗಳು ಮಂಗಳವಾರ ನಡೆದ ಕುಂದುಕೊರತೆ ಸಭೆಯಲ್ಲಿ ಕೇಳಿ ಬಂದವು.
ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್, ಜಿ.ಪಂ. ಸಿಇಓ ಚಾರುಲತಾ ಸೋಮಲ್, ಉಪ ವಿಭಾಗಾಧಿಕಾರಿ ಡಾ. ನಂಜುಂಡೇ ಗೌಡ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಬಂಗೇರಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುರಯ್ಯಾ ಅಬ್ರಾರ್, ಪ್ರಮುಖರಾದ ಟಿ.ಪಿ. ರಮೇಶ್, ಬಿ.ಟಿ. ಪ್ರದೀಪ್, ಕೆ.ಎಂ. ಲೋಕೇಶ್, ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಯಾಕೂಬ್ ಮತ್ತಿತರರು ಇದ್ದರು.