ಮಡಿಕೇರಿ, ಸೆ. 29 : ಟಿಪ್ಪು ಸುಲ್ತಾನ್ ಮತ್ತು ಫ್ರೆಂಚ್ ಮಿತ್ರ ಪಡೆಯಿಂದ ಸುಮಾರು 231 ವರ್ಷಗಳ ಹಿಂದೆ ನಡೆದಿದೆ ಎನ್ನಲಾಗಿ ರುವ ಕೊಡವರ ಹತ್ಯಾಕಾಂಡ ಒಂದು ಯುದ್ಧ ಅಪರಾಧವೆಂದು ಅಭಿಪ್ರಾಯಪಟ್ಟಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಈ ಬಗ್ಗೆ ಜನ ಸಮುದಾಯದ ಮನಸಾಕ್ಷಿಯನ್ನು ಜಾಗೃತಿಗೊಳಿಸಲು ವಿಶ್ವಸಂಸ್ಥೆ ಮುಂದಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದರು ಧರಣಿ ಸತ್ಯಾಗ್ರಹ ನಡೆಸಲಾಯಿತು.

1785ರಲ್ಲಿ ಟಿಪ್ಪು ಸುಲ್ತಾನ್ ಮತ್ತು ಫ್ರೆಂಚ್ ಮಿತ್ರ ಪಡೆ ಕೊಡಗಿನ ದೇವಟ್ ಪರಂಬ್‍ನಲ್ಲಿ ಕೊಡವರನ್ನು ಮೋಸದಿಂದ ಹತ್ಯೆ ನಡೆಸಿದೆ. ಘಟನೆ ಯನ್ನು ವಿಶ್ವಸಂಸ್ಥೆ ಅಂತರರಾಷ್ಟ್ರೀಯ ಹೋಲೋಕಾಸ್ಟ್ ರಿಮೆಂಬರೆನ್ಸ್ ಲಿಸ್ಟ್‍ನಲ್ಲಿ ಸೇರಿಸಬೇಕು ಮತ್ತು ಈ ಘೋರ ಯುದ್ಧಾಪರಾಧದ ಸಂಬಂಧ ಜಾಗತಿಕ ಸಮುದಾಯವನ್ನು ಜಾಗೃತಿಗೊಳಿಸಲು ಮುಂದಾಗಬೇಕು. ಭಾರತ ಸರ್ಕಾರ ಪಾರ್ಲಿಮೆಂಟಿನಲ್ಲಿ ಖಂಡನಾ ನಿರ್ಣಯ ಅಂಗೀಕರಿಸ ಬೇಕು ಮತ್ತು ರಾಷ್ಟ್ರೀಯ ಕೊಡವ ಸ್ಮಾರಕವನ್ನು ನಿರ್ಮಿಸಬೇಕು. ದೇವಟ್ ಪರಂಬು ನರಮೇಧ ನಡೆಸಲು ಟಿಪ್ಪುವಿನೊಂದಿಗೆ ನೇರ ಭಾಗಿಯಾಗಿ ಫ್ರೆಂಚ್ ಈಸ್ಟ್ ಇಂಡಿಯಾ ಕಂಪೆನಿಯ ಮಿತ್ರ ಪಡೆ ನಡೆಸಿದ ಕೃತ್ಯಕ್ಕಾಗಿ ಫ್ರೆಂಚ್ ಸರ್ಕಾರ ಕೊಡವರ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಸಿ.ಎನ್.ಸಿ. ಅಧ್ಯಕ್ಷ ನಾಚಪ್ಪ ಆಗ್ರಹಿಸಿದರು.

ಎರಡನೇ ಮಹಾ ಯುದ್ದ ಸಂದರ್ಭ ಜಪಾನ್‍ನ ಹಿರೋಶಿಮಾ - ನಾಗಸಾಕಿ ಮೇಲೆ ಅಮೇರಿಕಾ ನಡೆಸಿದ ಅಮಾನವೀಯ ಬಾಂಬ್ ಧಾಳಿಗೆ ಪಶ್ಚಾತ್ತಾಪ ಪಟ್ಟು ಇತ್ತೀಚೆಗೆ ಅಮೇರಿಕಾದ ಅಧ್ಯಕ್ಷ ಬರಾಕ್ ಒಬಾಮ ಜಪಾನ್ ಜನತೆಯ ಬಹಿರಂಗ ಕ್ಷಮೆ ಯಾಚಿಸಿದ್ದರು. ಅದೇ ರೀತಿ ಕೊಡವರ ಮೇಲೆ ನಡೆಸಿದ ಯುದ್ಧಾಪರಾಧಕ್ಕಾಗಿ ಫ್ರೆಂಚರೂ ಕೂಡ ನಮ್ಮ ಕ್ಷಮೆ ಕೇಳಬೇಕು. 6 ತಿಂಗಳ ಹಿಂದೆ ಫ್ರೆಂಚ್ ಅಧ್ಯಕ್ಷ ಫ್ರಾಂಕಾಯಿಸ್ ಹಾಲೆಂಡೇ ಮತ್ತು ಭಾರತದಲ್ಲಿನ ಫ್ರೆಂಚ್ ರಾಯಭಾರಿ ಫ್ರಾಂಕಾಯಿಸ್ ನಿಕೋಲಸ್ ಅವರಿಗೂ ಪತ್ರ ಬರೆದಿದ್ದ ಸಿಎನ್‍ಸಿ ಸಂಘಟನೆ 6 ತಿಂಗಳೊಳಗೆ ಕ್ಷಮೆಯಾಚಿಸದಿದ್ದಲ್ಲಿ ನಾವು ಸತ್ಯಾಗ್ರಹ ನಡೆಸುವದಾಗಿ ಎಚ್ಚರಿಕೆ ನೀಡಿತ್ತು. ಅದರಂತೆ ಇಂದು ಸತ್ಯಾಗ್ರಹ ನಡೆಸಿರುವದಾಗಿ ನಾಚಪ್ಪ ಹೇಳಿದರು.

ಈ ಸಂದರ್ಭ ಕಲಿಯಂಡ ಪ್ರಕಾಶ್, ಬೊಪ್ಪಂಡ ಬೊಳ್ಳಮ್ಮ, ಬಾಚರಣಿಯಂಡ ಚಿಪ್ಪಣ್ಣ, ಅಜ್ಜಿಕುಟ್ಟಿರ ಲೋಕೇಶ್, ಬೊಟ್ಟಂಗಡ ಗಿರೀಶ್, ಕಾಟುಮಣಿಯಂಡ ಉಮೇಶ್, ಮಣವಟ್ಟಿರ ಜಗದೀಶ್, ಪುಲ್ಲೇರ ಕಾಳಪ್ಪ, ಮಣವಟ್ಟಿರ ಶಿವಣಿ, ಮಣವಟ್ಟಿರ ನಂದ, ಮಣವಟ್ಟಿರ ಸ್ವರೂಪ್, ಚಂಬಾರಂಡ ಜನತ್, ಬಲ್ಲಚಂಡ ಟಿಟ್ಟು, ನಂದಿನೆರವಂಡ ವಿಜು, ಅಪ್ಪಯ್ಯ, ಕೂಪದಿರ ಸಾಬು, ಬೇಪಡಿಯಂಡ ಬಿದ್ದಪ್ಪ, ಮೂಕೊಂಡ ದಿಲೀಪ್, ಮಂದಪಂಡ ಮನೋಜ್, ಅಪ್ಪೇಂಗಡ ಮಾಲೆ, ಕರಿಯಮಾಡ ಶರಿನ್, ಚೀಯಕ್‍ಪೂವಂಡ ಉಮೇಶ್, ಮೊಣ್ಣಂಡ ಕಾರ್ಯಪ್ಪ ಇನ್ನಿತರರು ಪಾಲ್ಗೊಂಡಿದ್ದರು.