ಕೂಡಿಗೆ, ಸೆ. 25: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀಗೆಹೊಸೂರಿನಲ್ಲಿ ಸೋಮವಾರ ಪೇಟೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇವರ ಆಶ್ರಯದಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮ ಸೀಗೆಹೊಸೂರಿನ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಟಿ.ಕೆ. ವಿಶ್ವನಾಥ್ ವಹಿಸಿ ನಂತರ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಹಮ್ಮಿಕೊಂಡಿರುವ ವಿವಿಧ ಯೋಜನೆಗಳು ಜನಪರವಾಗಿದ್ದು, ಗ್ರಾಮಾಂತರ ಪ್ರದೇಶದ ಮಹಿಳೆಯರು ಒಂದುಗೂಡಿ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಮತ್ತು ತನ್ನ ಬದುಕನ್ನು ಸುಧಾರಿಸಿ ಕೊಳ್ಳಲು ಸಹಕಾರವಾಗುತ್ತವೆ ಎಂದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡಿಗೆ ಗ್ರಾ.ಪಂ. ಸದಸ್ಯ ಕೆ.ಜಿ. ಮಂಜಯ್ಯ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ತನ್ನ ಜ್ಞಾನ ವಿಕಾಸದೊಂದಿಗೆ ಹಣಕಾಸಿನ ವ್ಯವಹಾರವನ್ನು ವೃದ್ಧಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲ ಪಾಲಾಕ್ಷ ಅವರು ಮಹಿಳಾ ವಿಚಾರಗಳಿಗೆ ಸಂಬಂಧಿಸಿದಂತೆ ಕಾನೂನಾತ್ಮಕ ತಿಳುವಳಿಕೆ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ವೈ. ಪ್ರಕಾಶ್, ಕೂಡಿಗೆ ಗ್ರಾ.ಪಂ. ಸದಸ್ಯೆ ದಸ್ವಿ ಕೃಷ್ಣ, ಸೀಗೆಹೊಸೂರು ಒಕ್ಕೂಟದ ಅಧ್ಯಕ್ಷೆ ಪದ್ಮ ಕುಮಾರಿ, ಸಮನ್ವಯ ಅಧಿಕಾರಿ ಲತಾ, ಸೇವಾ ಪ್ರತಿನಿಧಿ ಅಧಿಕಾರಿ ಹೆಚ್.ಎಂ. ಬಸವರಾಜು ಉಪಸ್ಥಿತರಿದ್ದರು.