ಸುಂಟಿಕೊಪ್ಪ, ಜ. 7: ನಿವೇಶನ ರಹಿತರಿಗೆ ‘ಸೂರು’ ಕಲ್ಪಿಸಬೇಕು ಹಿಂದುಳಿದ ವರ್ಗದವರಿಗೆ, ಪರಿಶಿಷ್ಟ ಜಾತಿ ಪಂಗಡದವರಿಗೆ ಸ್ಮಶಾನ ಜಾಗ ನೀಡಬೇಕು. ಸರಕಾರಿ ಪೈಸಾರಿ ಜಾಗ ತೆರವುಗೊಳಿಸಿ ಬಡವರಿಗೆ ಮೂಲಭೂತ ಸೌಲಭ್ಯ ಒದಗಿಸ ಬೇಕೆಂದು ನಾಕೂರು ಶಿರಂಗಾಲ ಗ್ರಾ.ಪಂ.ನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ದಲ್ಲದೆ ಗ್ರಾಮಸಭೆ ಗೊಂದಲದ ಗೂಡಾಯಿತು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಗ್ರಾಮ ಸಭೆಯು ಗ್ರಾ.ಪಂ.ಅಧ್ಯಕ್ಷೆ ರಂಜನಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಆರಂಭದಲ್ಲಿ ಕಾಫಿಬೆಳೆಗಾರ ಕೆ.ಎ. ತಮ್ಮಯ್ಯ, ಪಾರಂಗಡ ರವಿ ಮಾತನಾಡಿ ನಾಕೂರು ಶಿರಂಗಾಲದ ಗ್ರಾಮಸ್ಥರು ಒಗ್ಗಟ್ಟಾಗಿ ಇದ್ದಾರೆ. ಪೈಸಾರಿ ಒತ್ತುವರಿ ಜಾಗ ಅತಿಕ್ರಮ ಸಂಬಂಧಿಸಿದಂತೆ ಕಂದಾಯ ಇಲಾಖೆಯವರು ಕೇವಲ 3 ಜನರ ಬಗ್ಗೆ ಸರ್ವೆ ನಡೆಸಿ ಪತ್ರಿಕೆಯಲ್ಲಿ ಮಾಲೀಕರ ಹೆಸರು ಹಾಕಿರುವ ಕ್ರಮ ಸರಿಯಲ್ಲ ಹಲವಷ್ಟು ಜಾಗ ಒತ್ತುವರಿಯಾಗಿದೆ. ದೇವಾಸ್ಥಾನಕ್ಕೆ ಸೀಮಿತ ಜಾಗ ಯಾರಿಗೂ ನೀಡಲಾಗುವದಿಲ್ಲ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.

ಕಂದಾಯ ಪ್ರಬಾರ ನೀರೀಕ್ಷಕÀ ನಾಗೇಶ್ ರಾವ್ ಮಾತನಾಡಿ ತಹಶೀಲ್ದಾರರ ನಿರ್ದೇಶನದಂತೆ ಸರಕಾರಿ ಜಾಗ ಒತ್ತುವರಿ ಮಾಡಿಕೊಂಡವರ ಜಾಗ ಸರ್ವೆ ನಡೆಸಲು ನೋಟಿಸು ನೀಡಲಾಗಿದೆ. ಆದರಂತೆ ಕಂದಾಯ ಇಲಾಖೆಯಿಂದ ಸರ್ವೆ ನಡೆಸಿ ಅಧಿಕಾರಿಗಳ ಸಮ್ಮುಖದಲ್ಲಿ ಸರಕಾರಿ ಜಾಗವನ್ನು ಇಲಾಖೆ ಸುಪರ್ದಿಗೆ ತೆಗೆದುಕೊಳ್ಳಲಾಗಿz.É ಯಾರಿಗೂ ತೊಂದರೆ ನೀಡುವ ಉದ್ದೇಶವಿಲ್ಲ ಎಂದು ಉತ್ತರಿಸಿದರು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿಯ ನಿವೇಶನ ರಹಿತರಿಗೆ ಹಾಗೂ ಸ್ಮಶಾನ ಜಾಗಕ್ಕೆ ಕಳೆದ 15 ವರ್ಷಗಳಿಂದ ಹೋರಾಟ ನಡೆಸುತ್ತಾ ಬರುತ್ತಿದ್ದೇವೆ; ಶ್ರೀಮಂತರು ಒತ್ತುವರಿ ಮಾಡಿಕೊಂಡು ತೋಟ ಮಾಡಿದ ಜಾಗವನ್ನು ನಾವು ಕೇಳುತ್ತಿಲ್ಲ; ಖಾಲಿ ಇರುವ ಸರಕಾರಿ ಜಾಗದಲ್ಲಿ ತಲತಲಾಂತರದಿಂದ ಕಾಫಿ ತೋಟದ ಲೈನ್ ಮನೆಯಲ್ಲಿ ಹಾಗೂ ಅಲ್ಲಲ್ಲಿ ಮನೆ ಗುಡಿಸಲು ಕಟ್ಟಿಕೊಂಡವರಿಗೆ ‘ಸೂರು’ ಕಲ್ಪಿಸಿಕೊಡಿ; ಸ್ಮಶಾನ ಜಾಗಕ್ಕೆ 2 ಎಕರೆ ನಿಗದಿಪಡಿಸಿ ಎಂದು ಹೋರಾಟಗಾರ ಪೊನ್ನ ಆಗ್ರಹಿಸಿದರು. ಇದಕ್ಕೆ ಪರ ವಿರೋಧ ಮಾತಿನ ವಾಗ್ದಾಳಿ ಮುಂದುವರಿದು ಸಭೆಯ ಠರಾವು ಮಂಡಿಸಲು ಆಗ್ರಹಿಸಲಾಯಿತು.

ಗ್ರಾಮಸ್ಥ ಶಿವದಾಸ ಮಾತನಾಡಿ ನಾವು ಕಳೆದ 15 ವರ್ಷಗಳಿಂದಲೂ ಸ್ಮಶಾನಕ್ಕೆ ಜಾಗ ದೊರಕಿಸಿಕೊಡಿ ಎಂದು ಪಂಚಾಯಿತಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಈಗ ಹೆಣಸುಡಲು ಜಾಗವಿಲ್ಲದೆ ಸುಟ್ಟ ಹೆಣದ ಜಾಗದಲ್ಲೇ ಮತ್ತೊಂದು ಹೆಣವನ್ನು ಸುಡುತ್ತಿದ್ದೇವೆ ಪಂಚಾಯಿತಿ ಆಡಳಿತ ಮಂಡಳಿಗೆ, ಊರಿನ ಶ್ರೀಮಂತರಿಗೆ, ಜನಪ್ರತಿನಿಧಿಗಳಿಗೆ ನಮ್ಮ ಬಗ್ಗೆ ಯಾಕೆ ಕರುಣೆ ಬರುತ್ತಿಲ್ಲ ಎಂದು ಆಕ್ರೋಶಭರಿತ ನುಡಿಯಾಡಿದರು. ಇದಕ್ಕೆ ಗ್ರಾಮಸ್ಥ ಶಾಂತಪ್ಪ, ಸುಬ್ರಮಣಿ, ಸುರೇಶ, ಚಂದ್ರವತಿ, ಸುಶೀಲ, ಲಕ್ಷ್ಮಿ ದನಿಗೂಡಿಸಿದರಲ್ಲದೆ, ಸರಕಾರಿ ಪೈಸಾರಿ ಜಾಗವಿದ್ದರೂ ಮನೆ ನಿರ್ಮಿಸಿಕೊಡಲು ಯಾಕೆ ಮೀನಾಮೇಷ ಎಣಿಸುತ್ತೀರಾ ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಕೇಶ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಜಿ.ಪಂ.ಸದಸ್ಯರು, ತಾ.ಪಂ.ಸದಸ್ಯರು ಕಂದಾಯ ಅಧಿಕಾರಿ ಜತೆ ಸಮಾಲೋಚನೆ ನಡೆಸಿದ ನಂತರ ನಾಕೂರು ಶಿರಂಗಾಲದಲ್ಲಿ ನಿವೇಶನ ರಹಿತರಿಗೆ ಸೂರು ಕಲ್ಪಿಸಲು ಹಾಗೂ ಸ್ಮಶಾನ ಜಾಗವನ್ನು ನೀಡಲು ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಯವರಿಗೆ ಗ್ರಾಮಸಭೆಯ ನಿರ್ಣಯವನ್ನು ಘೋಷಿಸಿದರು.

ಕುಡಿಯುವ ನೀರಿಗೆ ಆದÀ್ಯತೆ: ಸೋಮವಾರಪೇಟೆ ತಾಲೂಕು ಬರಗಾಲ ಪೀಡಿತ ಪ್ರದೇಶವಾಗಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಈಗಲೇ ಮುಂಜಾಗೃತೆ ವಹಿಸಿ ಹೆಚ್ಚಿಗೆ ಬೋರ್‍ವೆಲ್ ಕೊರೆಸುವಂತೆ ಗ್ರಾ.ಪಂ.ಸದಸ್ಯ ವಸಂತ ಚೆಸ್ಕಾಂ ಇಂಜಿನಿಯರ್‍ಗೆ ಆಗ್ರಹಿಸಿದರು.

ನಾಕೂರು ಶಿರಂಗಾಲದ ವಾರ್ಡ್ 2 ರಲ್ಲಿ ರಸ್ತೆ ಕಾಮಗಾರಿ ಕಳೆಪೆಯಾಗಿದೆ; ಪಡಿತರ ಚೀಟಿದಾರರಿಗೆ ಆಹಾರ ಸಾಮಗ್ರಿ ಕಡಿತಗೊಳಿಸಿದ್ದು; ರಸ್ತೆಗೆ ಜಾಗ ಕೊಟ್ಟರೂ ಬದಲಿ ವ್ಯವಸ್ಥೆ ಮಾಡದಿರುವ ಬಗ್ಗೆ ಗ್ರಾಮಸ್ಥರು ಚರ್ಚಿಸಿದರು.

ನಮ್ಮ ಮಕ್ಕಳೇ ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಮಕ್ಕಳ ಶಿಕ್ಷಣಕ್ಕೆ ಅಡಚಣೆಯಾಗುತ್ತಿರುವ ಹಿನ್ನೆಲೆ ಗ್ರಾಮಸಭೆಯನ್ನು ಶನಿವಾರ ಅಥವಾ ಭಾನುವಾರ ಆಯೋಜಿಸುವಂತೆ ಗ್ರಾಮಸ್ಥ ಸುರೇಶ್ ಆಗ್ರಹಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ ಮಾತನಾಡಿ ಊರಿನಲ್ಲಿ ಎಲ್ಲರೂ ಮೂಲಭೂತ ಸೌಲಭ್ಯ ಪಡೆದು ನೆಮ್ಮದಿಯ ಜೀವನ ನಡೆಸಲು ಜನಪ್ರತಿನಿಧಿಗಳ ಸಹಕಾರ ಸದಾ ಇರುತ್ತದೆ ಜಿ.ಪಂ. ಸಭೆಯಲ್ಲಿ ಚರ್ಚಿಸಿ ಸೂರು ಇಲ್ಲದವರಿಗೆ ಮನೆ ದೊರಕಿಸಿಕೊಡುವದು ಅಲ್ಲದೆ ಸ್ಮಶಾನಕ್ಕೆ ಜಾಗ ಮೀಸಲಿರಿಸಲು ಪ್ರಯತ್ನಿಸುವದಾಗಿ ಹೇಳಿದರು.

ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ, ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಡಿ. ಮಣಿ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ವಸಂತ, ಅಮೆಮನೆ ಚಂದ್ರಶೇಖರ, ಸತೀಶ,ಪ್ರೇಮ, ಪಿಡಿಓ ರಾಕೇಶ್, ಕಾರ್ಯದರ್ಶಿ ನಿತ್ಯಾ,ನೋಡಲ್ ಅಧಿಕಾರಿಯಾದ ಕೃಷಿ ಅಧಿಕಾರಿ ಪಿ.ಎಸ್. ಬೋಪಯ್ಯ,ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.