ಸೋಮವಾರಪೇಟೆ,ಅ.16: ಪ್ರತಿಯೋರ್ವರು ಪರಿಸರದ ರಕ್ಷಣೆ, ಪೋಷಣೆ ಮಾಡುತ್ತಾ ಪ್ರಕೃತಿಯಲ್ಲಿ ದೇವರನ್ನು ಕಾಣುವಂತಾಗಬೇಕೆಂದು ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕೇಶ್ ಪೀರನಮನೆ ಅಭಿಪ್ರಾಯಿಸಿದರು.

ಇಲ್ಲಿನ ಕೊಡವ ಸಮಾಜದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಾನಗಲ್ಲು, ಕಿರಗಂದೂರು, ಚೌಡ್ಲು ವಿಭಾಗದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಸಂಯುಕ್ತಾಶ್ರಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆಯ ಅಂಗವಾಗಿ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಬಿಟಿಸಿಜಿ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಮಾತನಾಡಿ, ಮನೆಯಲ್ಲಿನ ಮಹಿಳೆಯರು ಸುಸಂಸ್ಕøತರಾದರೆ ಇಡೀ ಕುಟುಂಬದೊಂದಿಗೆ ಸಮಾಜವೇ ಸುಸಂಸ್ಕøತವಾಗಲಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿದ್ದ ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಮಾತನಾಡಿ, ಪುರುಷ ಪ್ರಧಾನವಾಗಿದ್ದ ಸಮಾಜದಲ್ಲಿ ಮಹಿಳೆಯರೂ ಪ್ರಧಾನರು ಎಂಬದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಬೀತು ಪಡಿಸಿದೆ. ಮಹಿಳೆಯರು ಅಬಲೆ ಯರಲ್ಲ ಸಬಲೆಯರು, ಅವರುಗಳಿಗೆ ಜವಾಬ್ದಾರಿ ನೀಡಿದ್ದಲ್ಲಿ ಸಮರ್ಥವಾಗಿ ನಿಭಾಯಿಸಬಲ್ಲರು ಎಂದರು.

ವೇದಿಕೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ತಾಲೂಕು ಘಟಕದ ಅಧ್ಯಕ್ಷ ಬಿ.ಎ. ಭಾಸ್ಕರ್, ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜ, ಹಾನಗಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹೆಬ್ಬಾಲೆ ವಲಯದ ಮೇಲ್ವಿಚಾರಕ ರಾಜೇಶ್, ಶಾಂತಳ್ಳಿ ವಲಯದ ಮೇಲ್ವಿಚಾರಕಿ ವನಿತಾ, ಸೇವಾ ಪ್ರತಿನಿಧಿ ಸುನಿತಾ, ಕಲ್ಕಂದೂರು ಒಕ್ಕೂಟದ ಪುಷ್ಪ ಹಾಗೂ ಹಾನಗಲ್ಲು, ಕಿರಗಂದೂರು, ಚೌಡ್ಲು ವಿಭಾಗದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸಾಮೂಹಿಕ ಸತ್ಯನಾರಾಯಣ ಪೂಜಾ ಪೌರೋಹಿತ್ಯವನ್ನು ಯಡವನಾಡಿನ ಶಿವಬಸವೇಶ್ವರ ದೇವಾಲಯದ ಪ್ರಧಾನ ಅರ್ಚಕ ಶ್ರೀ ಜಗದೀಶ್ ಉಡುಪ ಹಾಗೂ ಮಂಜುನಾಥ್ ಉಡುಪ ವಹಿಸಿದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.