ಮಡಿಕೇರಿ, ಜೂ.23: ದೇವಟ್ ಪರಂಬು ಎನ್ನುವ ಪ್ರದೇಶವನ್ನು ನೆಪವಾಗಿರಿಸಿಕೊಂಡು ಯುದ್ಧ ಸ್ಮಾರಕದ ಹೆಸರಿನಲ್ಲಿ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಮೂಡುವದನ್ನು ತಪ್ಪಿಸಬೇಕು ಮತ್ತು ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡಬಾರದೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಾ.24 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಮನವಿ ಸಲ್ಲಿಸಲಾಗುವದೆಂದು ಜಿಲ್ಲಾ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಂ.ಚಂಗಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಭೂತಕಾಲದ ಘಟನೆಯನ್ನು ವರ್ತಮಾನದಲ್ಲಿ ನೆನಪಿಸಿಕೊಳ್ಳುತ್ತಾ ಜನಾಂಗೀಯ ಅವಹೇಳನ ಮತ್ತು ಪ್ರಕ್ಷುಬ್ಧತೆಗೆ ಕಾರಣವಾಗಬಲ್ಲ ವಿಚಾರಗಳ ಅನುಷ್ಠಾನಕ್ಕೆ ಅವಕಾಶ ನೀಡದೆ ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರ ಮುಂದಾಗ ಬೇಕು. ಕಪೋಲಕಲ್ಪಿತ ವಿಚಾರಗಳ ಮೂಲಕ ಅಶಾಂತಿ ಮೂಡುವದನ್ನು ತಪ್ಪಿಸಿ ಸ್ಮಾರಕ ನಿರ್ಮಾಣಕ್ಕೆ ಅವಕಾಶ ನೀಡದೆ ಜಿಲ್ಲೆಯ ಹಿತ ದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುವದಾಗಿ ಎಸ್.ಎಂ.ಚಂಗಪ್ಪ ತಿಳಿಸಿದ್ದಾರೆ.