ಸೋಮವಾರಪೇಟೆ, ಆ.10: ಈತ ವಿದ್ಯಾವಂತ, ಬುದ್ಧಿವಂತ! ಇಂಜಿನಿಯರಿಂಗ್ ಪದವೀಧರ, ಉತ್ತಮ ಕೃಷಿಕ, ಅತ್ಯುತ್ತಮ ಕವನ ರಚನೆಗಾರ..,ಪುಟಗಟ್ಟಲೆ ಕವನ ಬರೆದು ಕೋಣೆಯಲ್ಲಿ ಕೂಡಿಟ್ಟವ.., ಆದರೇನಂತೆ? ಕಳೆದ 18 ವರ್ಷಗಳಿಂದ ಕತ್ತಲಕೋಣೆ ಯಲ್ಲಿಯೇ ಈತನ ಬದುಕು. ಮನೆಯ ಅಟ್ಟವೇ ಈತನ ಅರಮನೆ. ಬೆಳಕಿಗೆ ಇಲ್ಲಿ ನಿಷಿದ್ಧ. ಆ ಕೋಣೆ ಯೊಳಗೆ ಮಾನಸಿಕ ಅಸ್ವಸ್ಥನಂತೆ ದಿನಕಳೆಯುತ್ತಿದ್ದ ಈತ ಕೊನೆಗೂ ಬೆಳಕಿನ ಪ್ರಪಂಚಕ್ಕೆ ಬಂದಿದ್ದಾನೆ. ಸ್ಥಳೀಯರೋರ್ವರ ಕಾಳಜಿ ಯಿಂದಾಗಿ ಆಸ್ಪತ್ರೆ ಸೇರಿದ್ದು, ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈತನ ಹೆಸರು ಉಮೇಶ್. ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ 2ನೇ ವಿಭಾಗದಲ್ಲಿ ಈತನ ಮನೆ. ಅಲ್ಲಿನ ತಿಪ್ಪೇಸ್ವಾಮಿ-ಮಠದ ಮಲ್ಲಿಗಮ್ಮ ಅವರ ನಾಲ್ವರು ಮಕ್ಕಳಲ್ಲಿ 2ನೇಯವ. ವಿದ್ಯಾರ್ಥಿ ದಿಸೆಯಿಂದಲೇ ಬುದ್ಧಿವಂತನಾಗಿದ್ದ ಈತ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಿದವ. ನಂತರ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದ ಯುವತಿಯೊಂದಿಗೆ ವಿವಾಹ. ಎರಡೇ ವರ್ಷದಲ್ಲಿ ಪತ್ನಿ ಈತನಿಂದ ಬೇರ್ಪಟ್ಟು ತವರು ಸೇರಿದಾಗ, ಮಾನಸಿಕವಾಗಿ ಕೊಂಚ ವಿಚಲಿತನಾಗಿದ್ದ. ಆದರೂ ತಮ್ಮ ಪಾಲಿನಲ್ಲಿದ್ದ ಗದ್ದೆಯಲ್ಲಿ ಕೃಷಿ ಮಾಡುತ್ತಿದ್ದ. ಎದೆ ಎತ್ತರದ ಕಾವು ಇದ್ದ ಗುದ್ದಲಿ ಯೊಂದಿಗೆ ಒಂದು ಎಕರೆ ಗದ್ದೆಯನ್ನು ಅಗೆದು ನಾಟಿ ಮಾಡಿ ಸುತ್ತಮುತ್ತಲಿನವರು ಮೂಗಿನ ಮೇಲೆ ಬೆರಳಿಟ್ಟು ಕೊಳ್ಳುವಂತೆ ಮಾಡಿದ್ದ. ಆದರೂ ಈ ಒಂದು ವರ್ಷದಲ್ಲಿ ಯಾರೊಂದಿಗೂ ಬೆರೆಯದೇ ಮೌನಿಯಾಗಿದ್ದ.

ನಂತರ ಅದೇನಾಯಿತೋ ಗೊತ್ತಿಲ್ಲ. ಮನೆಯ ಅಟ್ಟದ ಮೇಲೆ ಹೋದವ ಕೆಳಗಿಳಿದು ಬರಲೇ ಇಲ್ಲ. ಕೆಲವೊಮ್ಮೆ ಮಾತ್ರ ಕೆಳಬಂದು ಅಲ್ಪಸ್ವಲ್ಪ ತಿಂದು ಮತ್ತೆ ಅಟ್ಟ ಏರುತ್ತಿದ್ದ. ನೆರೆಕರೆಯವರು, ಊರವರು, ಖುದ್ದು ನೆಂಟರಿಷ್ಟರೊಂದಿಗಿನ ಸಂಪರ್ಕವನ್ನೂ ಕಡಿದುಕೊಂಡು ಅಂತರ್ಮುಖಿಯಾದ. ಈತನ ಸಹೋದರಿಗೂ ಕಿವಿ ಕೇಳಿಸುವದಿಲ್ಲ. ಮಾತನಾಡಲೂ ಅಷ್ಟಾಗಿ ಬರುವದಿಲ್ಲ. ಹೊರ ಪ್ರಪಂಚದ ಜ್ಞಾನವೂ ಅಷ್ಟಾಗಿ ಇಲ್ಲ. ಇದರಿಂದಾಗಿಯೇ ಅಟ್ಟ ಸೇರಿದ ಉಮೇಶನ ಆರೈಕೆಗೆ ಯಾರೂ ಇಲ್ಲದಾಯಿತು. ಅವನಷ್ಟಕ್ಕೆ ಅವನಿದ್ದ. ಸಹೋದರಿ ಅಡುಗೆ ಮಾಡಿ ಕೆಲಸಕ್ಕೆ ಹೋಗುತ್ತಿದ್ದಳು.

ಮೊದಮೊದಲು ಬೆಳಿಗ್ಗೆ 7 ಗಂಟೆಗೆ ಎದ್ದು ಕೆಳಬಂದು ಊಟ ಮಾಡಿ ಮತ್ತೆ ಅಟ್ಟಕ್ಕೆ ತೆರಳುತ್ತಿದ್ದವ, ಇತ್ತೀಚೆಗೆ ಕೆಳಬರುವದೇ ಕಡಿಮೆಯಾಗಿತ್ತು. ಇವನನ್ನು ಹೊರ ಪ್ರಪಂಚಕ್ಕೆ ತರುವ ಪ್ರಯತ್ನವನ್ನು ಕೆಲವರು ಮಾಡಿದರೂ ನಂತರ ನಿರುತ್ಸಾಹರಾದರು. ಲೋಕ ಜ್ಞಾನವಿಲ್ಲದ ಅಕ್ಕನಿಗೆ ಏನು ಮಾಡಬೇಕೆಂದೇ ತಿಳಿಯುತ್ತಿರಲಿಲ್ಲ. ಒಟ್ಟಾರೆ ದಿನಗಳು ಕಳೆಯುತ್ತಿತ್ತು.., ಉಮೇಶನ ದೇಹ ಕೃಶವಾಗುತ್ತಾ ಸಾಗಿತು. ಕೈ ಕಾಲುಗಳು ಸ್ವಾಧೀನ ಕಳೆದುಕೊಂಡು ಮಡಚಿಕೊಳ್ಳಲಾರಂಭಿಸಿದವು. ಮಾತಂತೂ ನಿಂತೇ ಹೋಗಿತ್ತು. ಕೆಲವೊಂದು ಶಬ್ದಮಾತ್ರ ಹೊರಬರುತ್ತಿತ್ತು.

ಕಳೆದ ಹಲವು ವರ್ಷಗಳಿಂದ ತನ್ನ ಮನೆಯ ಅಟ್ಟದ ಮೇಲೆಯೇ ದಿನಕಳೆಯುತ್ತಿದ್ದ ಉಮೇಶನ ಚಿಕಿತ್ಸೆಗೆ ಇದೀಗ ಕೊಡಗು

(ಮೊದಲ ಪುಟದಿಂದ) ಜಿಲ್ಲಾ ಅಂಗ ವಿಕಲರ, ಅಂಧರ, ಬುದ್ಧಿ ಮಾಂದ್ಯರ ಅಬಲರ ಶ್ರೇಯೋಭಿವೃದ್ಧಿ ಸಮಿತಿ ಕೈಚಾಚಿದ್ದು, ಸೋಮವಾರ ಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೊರ ಪ್ರಪಂಚಕ್ಕೆ ಬಾರದೇ ತನ್ನದೇ ಲೋಕದಲ್ಲಿದ್ದ ಈತ ಇದೀಗ ದೈಹಿಕ ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಈತನ ಸ್ಥಿತಿಗೆ ಮರುಗಿದ ಶ್ರೇಯೋಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ವೈ. ಇಂದ್ರೇಶ್ ಹಾಗೂ ಇತರರು, ಉಮೇಶ್ ಅವರನ್ನು ಸೋಮವಾರಪೇಟೆಯ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ.

ಹೊರ ಪ್ರಪಂಚಕ್ಕೆ ಬಾರದೇ ಅಟ್ಟದಲ್ಲಿಯೇ ಇರುತ್ತಿದ್ದ ಇವರನ್ನು ಹೊರಗೆ ಕರೆತರಲು ಸಾಕಷ್ಟು ಪ್ರಯತ್ನ ಪಡಲಾಗಿದ್ದರೂ ಪ್ರಯೋಜನ ವಾಗಿರಲಿಲ್ಲ. ಇದೀಗ ಜಿಲ್ಲಾ ಆರೋಗ್ಯಾಧಿಕಾರಿ ಮತ್ತು ಜಿಲ್ಲಾ ವಿಕಲ ಚೇತನ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೆ.ವೈ. ಇಂದ್ರೇಶ್ ಹೇಳಿದರು.

ಮನೆಯ ಕತ್ತಲೆ ಕೋಣೆ ಯೊಳಗಿದ್ದ ಇವರು ಹಲವು ಕವಿತೆಗಳನ್ನು ಬರೆದಿದ್ದಾರೆ. ಕಳೆದ ಕೆಲ ಸಮಯದಿಂದ ತೀರಾ ನಿತ್ರಾಣ ಗೊಂಡಿದ್ದರು. ಈ ಹಿನ್ನೆಲೆ ಇವರ ಸಹೋದರಿ ಮಂಜುಳಾ ಅವರ ಸಹಕಾರದೊಂದಿಗೆ ಸಮಿತಿಯ ಕಾರ್ಯದರ್ಶಿ ಕಾಳಯ್ಯ, ಖಜಾಂಚಿ ಭಗವಾನ್, ಜೆ.ಆರ್. ಸುಬ್ರಮಣ್ಯ ಅವರುಗಳೊಂದಿಗೆ ಉಮೇಶನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯ ಆನಂದ್‍ಕುಮಾರ್ ಅವರು ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಇಂದ್ರೇಶ್ ಮಾಹಿತಿ ನೀಡಿದರು.

ಇಲ್ಲಿ ಒಂದು ವಾರಗಳ ಕಾಲ ಚಿಕಿತ್ಸೆ ನೀಡಿದ ನಂತರ ಅವರ ಅರೋಗ್ಯ ಸ್ಥಿತಿಯನ್ನು ಗಮನದಲ್ಲಿರಿಸಿ ಕೊಂಡು ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲು ಚಿಂತಿಸ ಲಾಗಿದೆ. ಡಿಹೆಚ್‍ಓ ರಂಗಪ್ಪ, ವಿಕಲ ಚೇತನ ಅಧಿಕಾರಿ ಜಗದೀಶ್ ಅವರುಗಳೊಂದಿಗೆ ಸಮಾಲೋಚಿಸಿ ಮುಂದಿನ ಚಿಕಿತ್ಸೆ ನೀಡಲಾಗುವದು ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆ ಕಳೆದ 18 ವರ್ಷಗಳಿಂದ ಕತ್ತಲೆಯಲ್ಲೇ ದಿನ ಕಳೆಯುತ್ತಿದ್ದ ಉಮೇಶ್ ಅವರಿಗೆ ಕತ್ತಲಿನಿಂದ ಮುಕ್ತಿ ದೊರಕಿದೆ. ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪ್ರಾರಂಭಿಸಲಾಗಿದ್ದು, ಕೆಲ ದಿನಗಳ ನಂತರ ಮುಂದಿನ ಹಂತದ ಚಿಕಿತ್ಸೆಯ ಬಗ್ಗೆ ತೀರ್ಮಾನಿಸ ಲಾಗುವದು ಎಂದು ವೈದ್ಯರು ತಿಳಿಸಿದ್ದು, ಒಟ್ಟಾರೆ ಉಮೇಶ್ ಅವರು ಅವರ ವೈಯಕ್ತಿಕ ಕೆಲಸ ಕಾರ್ಯಗಳನ್ನಾದರೂ ಮಾಡಿ ಕೊಳ್ಳುವಷ್ಟು ಶಕ್ತರಾದರೆ ಸಾಕು. ಇದೇ ನಮ್ಮ ಆಶಯ ಎಂದು ಇಂದ್ರೇಶ್ ಅವರು ಪತ್ರಿಕೆಯೊಂದಿಗೆ ಅಭಿಪ್ರಾಯಿಸಿದ್ದಾರೆ. - ವಿಜಯ್ ಹಾನಗಲ್