ಸೋಮವಾರಪೇಟೆ, ಜೂ. 22: ಕಳೆದ ತಾ. 19 ರಂದು ನಡೆದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಮೋಹನ್ ಎಂಬವರ ಮೇಲಿನ ಹಲ್ಲೆ ಆರೋಪಿಗಳಲ್ಲಿ ಪ್ರಮುಖನಾಗಿರುವ ಕರೀಂ ಬೇಗ್ ಎಂಬಾತನನ್ನು ಮುಂದಿನ 48 ಗಂಟೆಗಳ ಒಳಗೆ ಬಂಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಸೋಮವಾರಪೇm Éಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಇಲ್ಲಿನ ವಿವೇಕಾನಂದ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಹಲ್ಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕರೀಂ ಬೇಗ್‍ನನ್ನು ಬಂಧಿಸದೇ ಇರುವ ಪೊಲೀಸರ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಹಿಂದೂ ಸಂಘಟನೆಗಳ ಮುಖಂಡರ ಮೇಲಿನ ಹಲ್ಲೆ, ಕೊಲೆ, ಕೊಲೆ ಯತ್ನದಂತಹ ಪ್ರಕರಣಗಳಲ್ಲಿ ಶೀಘ್ರವಾಗಿ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ. ಇದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತವೇ ಕಾರಣ ಎಂದು ಆರೋಪಿಸಿ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಸೇರಿದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತಾ.ಪಂ. ಸದಸ್ಯ ಎಂ.ಬಿ. ಅಭಿಮನ್ಯುಕುಮಾರ್, ಟಿಪ್ಪು ಜಯಂತಿಯಂದು ಕೊಲೆಯಾದ ಕುಟ್ಟಪ್ಪ ಅವರ

ಸಾವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಆಕಸ್ಮಿಕ ಎಂದು ಉಲ್ಲೇಖಿಸಿದ ಮಾರನೇ ದಿನವೇ ಸೋಮವಾರಪೇಟೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲೆ ಕೊಲೆ ಯತ್ನ ನಡೆದಿದೆ. ‘ಮುಂದಿನ ಟಿಪ್ಪು ಜಯಂತಿಯ ಸಂದರ್ಭದಲ್ಲಿ ನೀನು ಇರಬಾರದು’ ಎಂದು ಹೇಳುತ್ತಾ ಮಾರಣಾಂತಿಕ ಧಾಳಿ ನಡೆಸಿರುವ ಪ್ರಮುಖ ಆರೋಪಿಯನ್ನು ಬಂಧಿಸದೇ ಇರುವ ಪೊಲೀಸರ ಕ್ರಮ ಸಂಶಯಕ್ಕೆಡೆ ಮಾಡಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರ ಮೇಲೆ ನಿರಂತರ ಧಾಳಿ ನಡೆಯುತ್ತಿದ್ದು, ಈ ಬಗ್ಗೆ ದೂರುಗಳು ದಾಖಲಾದರೂ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್‍ಗಳನ್ನು ಫೇಸ್‍ಬುಕ್‍ನಲ್ಲಿ ಪ್ರಕಟಿಸಿ ಮೊಕದ್ದಮೆ ಎದುರಿಸುತ್ತಿರುವ ಕರೀಂ ಬೇಗ್, ಈ ಹಿಂದಿನಿಂದಲೂ ಸೋಮವಾರಪೇಟೆಯಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾನೆ. ಇದರ ಮುಂದುವರೆದ ಭಾಗವೇ ಮೋಹನ್ ಮೇಲಿನ ಹಲ್ಲೆ ಎಂದು ಹೇಳಿದ ಅಭಿಮನ್ಯುಕುಮಾರ್, ತಕ್ಷಣ ಈತನನ್ನು ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಿದರೆ ಇದರ ಹಿಂದಿರುವ ಜಾಲದ ಬಗ್ಗೆ ಮಾಹಿತಿ ಹೊರಬರಲಿದೆ ಎಂದರು.

ಮುಂದಿನ 48 ಗಂಟೆಗಳ ಒಳಗೆ ಆರೋಪಿಯ ಬಂಧನವಾಗದಿದ್ದರೆ ಕೊಡಗು ಜಿಲ್ಲಾ ಬಂದ್‍ಗೆ ಕರೆ ನೀಡಲಾಗುವದು. ಮುಂದಿನ ಅನಾಹುತಗಳಿಗೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದು ಎಚ್ಚರಿಸಿದರು. ಕೊಡಗಿನಲ್ಲಿ ಶಾಂತಿ ಕದಡಲು ಕೆಎಫ್‍ಡಿ ಹಾಗೂ ಪಿಎಫ್‍ಐ ಸಂಘಟನೆ ಪ್ರಯತ್ನಿಸುತ್ತಿದ್ದು ಇದಕ್ಕೆ ಜಿಲ್ಲಾಡಳಿತ ಆಸ್ಪದ ನೀಡಬಾರದು. ಎರಡೂ ಸಂಘಟನೆಗಳನ್ನು ಜಿಲ್ಲೆಯಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ ಸಂಚಾಲಕ ಉಲ್ಲಾಸ್ ತಿಮ್ಮಯ್ಯ ಮಾತನಾಡಿ, ಕೋಮು ಸೂಕ್ಷ್ಮ ಪ್ರದೇಶವಾಗಿರುವ ಜಿಲ್ಲೆಯಲ್ಲಿ ಹಿಂದೂಗಳ ಮೇಲೆ ದಮನಕಾರಿ ನೀತಿ ಅನುಸರಿಸುವ ಮೂಲಕ ಹಿಂದೂ ಸಮಾಜವನ್ನು ಕೆಣಕಲಾಗುತ್ತಿದೆ. ಈ ಹಿಂದೆ ಟಿಪ್ಪು ಜಯಂತಿ ಸಂದರ್ಭ ಜಿಲ್ಲಾಧಿಕಾರಿಗಳು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸಿ ಜಯಂತಿ ಆಚರಿಸಲು ಮುಂದಾದರು. ಈ ಸಂದರ್ಭ ಮಾರಕಾಸ್ತ್ರಗಳೊಂದಿಗೆ ಧಾಳಿ ನಡೆಸಿದ ದುಷ್ಕರ್ಮಿಗಳ ಬಗ್ಗೆ ಸರಿಯಾಗಿ ತನಿಖೆ ನಡೆಸದೇ ಆರೋಪಿಗಳನ್ನು ಹಾಗೆಯೇ ಬಿಟ್ಟ ಪರಿಣಾಮ ಈ ಪರಿಸ್ಥಿತಿ ಎದುರಾಗಿದೆ ಎಂದರು.

ಹಲ್ಲೆ ಆರೋಪಿಗೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ದೊರಕಿಸಲು ಉದ್ದೇಶಪೂರ್ವಕವಾಗಿ ಪೊಲೀಸರು ಸಹಕರಿಸುತ್ತಿದ್ದಾರೆ. ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮಿ ಅವರ ಮೇಲೆ ಹಲ್ಲೆ ನಡೆಸಿದ ಆದಂ ಅವರನ್ನು ಬಂಧಿಸದ ಪೊಲೀಸರು ಅವರು ನಿರೀಕ್ಷಣಾ ಜಾಮೀನು ಪಡೆಯಲು ಸಹಕಾರ ನೀಡಿದ್ದಾರೆ. ಜಾಮೀನಿನ ಮೇಲೆ ಹೊರಬಂದ ನಂತರವೂ ಗಲಭೆ ಸೃಷ್ಟಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಯಾವದೇ ಕ್ರಮ ಕೈಗೊಳ್ಳುತ್ತಿಲ್ಲ. ತಕ್ಷಣ ಆದಂ ಅವರನ್ನು ಬಂಧಿಸುವಂತೆ ಒತ್ತಾಯಿಸಿದರು.

ರಾಜ್ಯಾದ್ಯಂತ ಹಿಂದೂಪರ ಸಂಘಟನೆಗಳ ಮುಖಂಡರ ಹತ್ಯೆ, ಹಲ್ಲೆ, ಕೊಲೆಯತ್ನದಂತಹ ಘಟನೆಗಳು ನಡೆಯುತ್ತಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಹಿಂದೂ ಮುಖಂಡರ ಹತ್ಯೆಯನ್ನು ಸರ್ಕಾರವೇ ಪ್ರಾಯೋಜಿಸುತ್ತಿರುವಂತೆ ಕಂಡುಬರುತ್ತಿದೆ. ಇದು ಮುಂದುವರೆದರೆ ಹಿಂದೂ ಸಮಾಜವೇ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹಿಂದೂ ಜಾಗರಣಾ ವೇದಿಕೆಯ ಮೈಸೂರು ವಿಭಾಗ ಸಂಚಾಲಕ ಜೀವನ್, ತಾಲೂಕು ಘಟಕದ ಪದಾಧಿಕಾರಿಗಳಾದ ದರ್ಶನ್, ಸುಭಾಷ್ ತಿಮ್ಮಯ್ಯ, ನಗರಳ್ಳಿ ರಮೇಶ್, ಉಮೇಶ್, ಕೆ.ಜಿ. ಸುರೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಜಿಪಂ ಸದಸ್ಯರಾದ ಪೂರ್ಣಿಮಾ ಗೋಪಾಲ್, ಬಿ.ಜೆ. ದೀಪಕ್, ತಾ.ಪಂ. ಸದಸ್ಯೆ ತಂಗಮ್ಮ, ಮುಖಂಡರುಗಳಾದ ಬನ್ನಳ್ಳಿ ಗೋಪಾಲ್, ಪದ್ಮನಾಭ್, ಮಹೇಶ್, ಟಿ.ಕೆ. ರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.