ಕುಶಾಲನಗರ, ಆ. 2: ಕೇಂದ್ರ ಸರ್ಕಾರದ ಹೊಸ ಯೋಜನೆ ಪ್ರಕಾರ ಯಾವದೇ ಹಿಂಜರಿಕೆ ಇಲ್ಲದೆ ತಮ್ಮ ಆಸ್ತಿ ಘೋಷಣೆ ಮಾಡಿ, ನೆಮ್ಮದಿ ಯಿಂದ ಜೀವನ ನಡೆಸಬಹುದು ಎಂದು ಮಡಿಕೇರಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿ ಆರ್. ನಾರಾಯಣ ನಂಬಿಯಾರ್ ಹೇಳಿದರು. ಕುಶಾಲನಗರ ರೋಟರಿ ಸಂಸ್ಥೆ ಮತ್ತು ಮಡಿಕೇರಿ ಆದಾಯ ತೆರಿಗೆ ಇಲಾಖೆ ಜಂಟಿಯಾಗಿ ಏರ್ಪಡಿಸಿದ್ದ ಆದಾಯ ಘೋಷಣೆ ಯೋಜನೆ-2016 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆ ಅಡಿಯಲ್ಲಿ ಯಾವದೇ ಹಣಕಾಸು ವರ್ಷದ ಅಘೋಷಿತ ಆಸ್ತಿ ಅಥವಾ ತೆರಿಗೆ ಪಾವತಿ ಮಾಡದ ಆದಾಯದ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಕೊಡಬಹುದು. ಈ ಯೋಜನೆಗೆ ಈ ಸಾಲಿನ ಸೆಪ್ಟೆಂಬರ್ 30ರ ತನಕ ಕಾಲಾವಕಾಶ ಇದೆ. ಈ ಯೋಜನೆಯಲ್ಲಿ ಘೋಷಣೆ ಮಾಡಿದ ಆಸ್ತಿ ಅಥವಾ ಆದಾಯಕ್ಕೆ ತೆರಿಗೆ, ಸೆಸ್ ಸೇರಿದಂತೆ ಘೋಷಿತ ಆಸ್ತಿ ಅಥವಾ ಆದಾಯದ ಶೇಕಡ 45 ರಷ್ಟನ್ನು ಸರ್ಕಾರಕ್ಕೆ ಕಟ್ಟಬೇಕು. ಈ ಮೂಲಕ ಆದಾಯ ಇಲಾಖೆಯ ದಂಡ, ಶಿಕ್ಷೆ ಇತ್ಯಾದಿ ಕ್ರಮಗಳಿಂದ ಪಾರಾಗಬಹುದು. ಅಲ್ಲದೆ ಆದಾಯ ಘೋಷಣೆ ಮಾಡಿದವರ ವಿವರವನ್ನು ಗೌಪ್ಯವಾಗಿ ಇಡಲಾಗುವದು. ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಆದಾಯ ಘೋಷಣೆ ಮಾಡುವವರು ಮೈಸೂರಿನ ಮುಖ್ಯ ಆಯುಕ್ತರ ಮುಂದೆ ಫಾರಂ ನಂಬರ್ ಒಂದರಲ್ಲಿ ತಮ್ಮ ಆದಾಯವನ್ನು ಘೋಷಿಸಬಹುದು. ಇದಕ್ಕೆ ಫಾರಂ 2ರಲ್ಲಿ 15 ದಿನಗಳ ಒಳಗೆ ಸ್ವೀಕೃತಿ ಪತ್ರ ಸಿಗುತ್ತದೆ. ಫಾರಂ ನಂಬರ್ ಮೂರರಲ್ಲಿ ತೆರಿಗೆ ಮತ್ತು ಸೆಸ್ ಪಾವತಿ ಮಾಡಬೇಕು. ಫಾರಂ ನಂಬರ್ ನಾಲ್ಕರಲ್ಲಿ ಇದಕ್ಕೆ ಮತ್ತೊಂದು ಸ್ವೀಕೃತಿ ಪತ್ರ ದೊರೆಯುತ್ತದೆ. ಇದರ ನಂತರ ಆದಾಯ ತೆರಿಗೆ ಇಲಾಖೆಯಿಂದ ಯಾವದೇ ತನಿಖೆಯಾಗಲಿ, ಶಿಕ್ಷೆಯಾಗಲಿ ಇರುವದಿಲ್ಲ. ತೆರಿಗೆ ಪಾವತಿಸುವ ಮೂಲಕ ಆತಂಕದಿಂದ ಹೊರಗುಳಿಯಬಹುದು ಎಂದು ಮಾಹಿತಿ ಒದಗಿಸಿದರು.
ಆದಾಯ ತೆರಿಗೆ ಇಲಾಖೆ ಇನ್ಸ್‍ಪೆಕ್ಟರ್ ಪಿ. ಪದ್ಮಕುಮಾರ್, ರೋಟರಿ ಕಾರ್ಯದರ್ಶಿ ಎನ್.ಜಿ. ಪ್ರಕಾಶ್ ವೇದಿಕೆಯಲ್ಲಿದ್ದರು. ಲೆಕ್ಕಪರಿಶೋಧಕ ಈಶ್ವರ್‍ಭಟ್, ಆದಾಯ ಘೋಷಣೆ ಯೋಜನೆ - 2016ರ ಬಗ್ಗೆ ಮಾಹಿತಿ ನೀಡಿದರು.