ಮಡಿಕೇರಿ, ಸೆ.8: ಸರ್ಕಾರ ಹಿರಿಯ ನಾಗರಿಕರಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಂಡಿದ್ದು, ಇದರ ಸದುಪಯೋಗ ವನ್ನು ಪ್ರತಿಯೊಬ್ಬ ಹಿರಿಯ ನಾಗರಿಕರು ಪಡೆಯುವಂತೆ ಆಗಬೇಕು ಎಂದು ಹಿರಿಯ ನಾಗರಿಕರ ಫೋರಂ ಅಧ್ಯಕ್ಷ ಜಿ.ಟಿ. ರಾಘವೇಂದ್ರ ಹೇಳಿದರು.ನಗರದ ಗಾಂಧಿ ಮೈದಾನದಲ್ಲಿ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲೆಯ ಹಿರಿಯ ನಾಗರಿಕರಿಗೆ ಆಟೋಟ ಸ್ಪರ್ಧೆ ಮತ್ತು ಸಾಂಸ್ಕøತಿಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಹಿರಿಯರಿಗೆ ಇಲಾಖೆ ವತಿಯಿಂದ ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ, ಬಸ್‍ಪಾಸ್ ಸೌಲಭ್ಯಗಳಿವೆ. ಅವುಗಳನ್ನು ಪಡೆದುಕೊಂಡು ಕ್ರಿಯಾಶೀಲರಾಗಿ ಜೀವನ ನಡೆಸುವಂತಾಗಬೇಕು ಎಂದು ಅವರು ತಿಳಿಸಿದರು. ಸಮಾಜದಲ್ಲಿ ಹಿರಿಯರು ಕಿರಿಯರನ್ನು ಮತ್ತು ಕಿರಿಯರು ಹಿರಿಯರನ್ನು ಗೌರವಿಸುವಂತಾದರೆ ಕುಟುಂಬದಲ್ಲಿ ಅನ್ಯೋನ್ಯ ಜೀವನ ಕಾಣಬಹುದು ಹಾಗೂ ಆತ್ಮ ವಿಶ್ವಾಸದಿಂದ ಹಿರಿಯರು ಬದುಕಿನ ಬಂಡಿ ಸಾಗಿಸಬಹುದು ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ್ ಮಾತನಾಡಿ ಹಿರಿಯ ನಾಗರಿಕರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯುವಲ್ಲಿ ಮುಂದಾಗಬೇಕು. ಹಿರಿಯ ನಾಗರಿಕರ ಆರೋಗ್ಯ ವೃದ್ಧ್ದಿಸಲು ಕ್ರೀಡಾ ಕಾರ್ಯಕ್ರಮಗಳು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಜಿಲ್ಲಾ ಮಟ್ಟದಿಂದ ಆಯ್ಕೆಯಾದ ಹಿರಿಯ ನಾಗರಿಕ ಅಭ್ಯರ್ಥಿಗಳನ್ನು ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಇಲಾಖೆ ವತಿಯಿಂದ ಸಹಕರಿಸ ಲಾಗುವದು ಎಂದು ತಿಳಿಸಿದರು.

60 ರಿಂದ 70 ವರ್ಷದ ಪುರುಷರಿಗೆ 100 ಮೀ. ಓಟ, ಶಾಟ್ ಪುಟ್, ಮಹಿಳೆಯರಿಗೆ 400 ಮೀ. ನಡಿಗೆ, ಥ್ರೋಯಿಂಗ್ ಕ್ರಿಕೆಟ್‍ಬಾಲ್, 71 ರಿಂದ 80 ವರ್ಷದ ಪುರುಷರಿಗೆ 800 ಮೀ. ನಡಿಗೆ, ಥ್ರೋಯಿಂಗ್ ಕ್ರಿಕೆಟ್ ಬಾಲ್, ಮಹಿಳೆಯರಿಗೆ 200 ಮೀ ನಡಿಗೆ ಹಾಗೂ ಥ್ರೋಯಿಂಗ್ ಕ್ರಿಕೆಟ್ ಬಾಲ್, 81 ವರ್ಷ ಮೇಲ್ಪಟ್ಟ ವಯೋಮಾನದ ಪುರುಷರಿಗೆ 400 ಮೀ ನಡಿಗೆ, ಥ್ರೋಯಿಂಗ್ ಕ್ರಿಕೆಟ್ ಬಾಲ್, ಮಹಿಳೆಯರಿಗೆ 100 ಮೀ ನಡಿಗೆ, ಥ್ರೋಯಿಂಗ್ ಕ್ರಿಕೆಟ್ ಬಾಲ್, ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಪುರುಷರು ಹಾಗೂ ಮಹಿಳೆಯರಿಗಾಗಿ ಕಥೆ ಹೇಳುವುದು ಹಾಗೂ ಜಾನಪದ ಗೀತೆಗಳನ್ನು ಹಾಡುವ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಲ್ಲಿ ಹಿರಿಯ ನಾಗರಿಕರು ಭಾಗವಹಿಸಿದ್ದರು.