ಮಡಿಕೇರಿ, ಅ. 21: ಕರ್ತವ್ಯದ ವೇಳೆ ಹುತಾತ್ಮರಾದ ಸೇವಾ ತತ್ಪರ ಪೊಲೀಸರ ಸ್ಮರಣಾರ್ಥ ಇಂದು ಮಡಿಕೇರಿಯಲ್ಲಿ ಭಾವಪೂರ್ಣ ನಮನ ಕಾರ್ಯಕ್ರಮ ನಡೆಯಿತು. ಪೊಲೀಸ್ ಗಾಂಭೀರ್ಯ, ಶಿಸ್ತು ಹಾಗೂ ಸಮವಸ್ತ್ರದೊಂದಿಗೆ, ಮನಮಿಡಿಯುವ ಶೋಕಪೂರ್ಣ ವಾದ್ಯದೊಂದಿಗೆ ಹುತಾತ್ಮರನ್ನು ಸ್ಮರಿಸಿ ಹೂಹಾರ ಅರ್ಪಿಸಲಾಯಿತು. ದೇಶದಲ್ಲಿ ಇದುವರೆಗೆ 473 ಪೊಲೀಸರು ಬಿಎಸ್‍ಎಫ್ ಹಾಗೂ ಸಿಆರ್‍ಪಿಎಫ್‍ನಲ್ಲಿ ಹುತಾತ್ಮರಾಗಿದ್ದು, ಅವರಲ್ಲಿ ಕೊಡಗಿನ ಹನ್ನೊಂದು ಮಂದಿಯೂ ಸೇರಿರುವದು ದುಃಖಮಿಶ್ರಿತ ಹೆಮ್ಮೆಯ ವಿಚಾರ.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ, ಸಮಾಜದಲ್ಲಿ ಶಾಂತಿಗಾಗಿ ಪೊಲೀಸರು ದಿನದ 24 ಗಂಟೆಯೂ ಜಾಗೃತರಾಗಿ ಕೆಲಸ ನಿರ್ವಹಿಸುತ್ತಾರೆ. ದೇಶದಲ್ಲಿ ನಾಗರಿಕರ ರಕ್ಷಣೆ ಮತ್ತು ಶಾಂತಿ ಕಾಪಾಡುವಲ್ಲಿ ಪೊಲೀಸರ ಪಾತ್ರ ಮಹತ್ತರ ಎಂದು ಹೇಳಿದರು.

ಪೊಲೀಸರು ತಮ್ಮ ಆತ್ಮ ರಕ್ಷಣೆಯನ್ನು ಬದಿಗಿಟ್ಟು ಸಾರ್ವಜನಿಕರ ರಕ್ಷಣೆಗೆ ಮುಂದಾಗುತ್ತಾರೆ. ಪೊಲೀಸರ ಸೇವೆ ಸದಾ ಸ್ಮರಣೀಯ. ಕಠಿಣ ಸಂದರ್ಭದಲ್ಲಿ ಸಮಸ್ಯೆ ಹಾಗೂ ಸವಾಲುಗಳನ್ನು ಬಗೆಹರಿಸುವಲ್ಲಿ ಪೊಲೀಸರ ಪಾತ್ರ ದೊಡ್ಡದು ಎಂದು ಹೇಳಿದರು.

ನಾಗರಿಕರು ನೆಮ್ಮದಿಯಾಗಿ ಇರಬೇಕಾದರೆ ಪೊಲೀಸರ ಕರ್ತವ್ಯ ಪ್ರಜ್ಞೆ ಹೆಚ್ಚಿರುತ್ತದೆ. ಪೊಲೀಸರು ಕೆಲಸದಲ್ಲಿ ನಿಷ್ಠೆ ತೋರಿಸದಿದ್ದರೆ ಸಮಾಜದ ನೆಮ್ಮದಿ ಮತ್ತು ಶಾಂತಿಯನ್ನು ಊಹಿಸಲು ಅಸಾಧ್ಯ ಎಂದು ಹೇಳಿದರು.

ಕಳೆದ ವರ್ಷ ಕರ್ತವ್ಯ ನಿರ್ವಹಿಸುವಾಗ ದೇಶದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿಗಳು ಮತ್ತು ಪೇದೆಗಳ ವಿವರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಅವರು ಓದಿದರು.