ಸೋಮವಾರಪೇಟೆ, ಜೂ. 8: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರಂತರ ಹುಲಿ ಧಾಳಿ ನಡೆಸುತ್ತಿದ್ದು, ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಹುಲಿ ಧಾಳಿಯಿಂದ ಸಾರ್ವಜನಿಕರು ಭಯಭೀತರಾಗಿ ದಿನ ಕಳೆಯುವಂತಾಗಿದ್ದು, ಅರಣ್ಯ ಇಲಾಖೆಯ ಎದುರು ಪ್ರತಿಭಟನೆ ನಡೆಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈವರೆಗೆ 20ಕ್ಕೂ ಅಧಿಕ ಜಾನುವಾರುಗಳನ್ನು ಬಲಿ ತೆಗೆದುಕೊಂಡಿರುವ ವ್ಯಾಘ್ರ, ಮೊನ್ನೆಯಷ್ಟೇ ಕುಂಬಾರಗಡಿಗೆ ಗ್ರಾಮದ ತಂಬುಕುತ್ತಿರ ಮುದ್ದಯ್ಯ ಅವರಿಗೆ ಸೇರಿದ ಜಾನುವಾರನ್ನು ಕೊಂದು ಹಾಕಿದೆ. ಕಳೆದ ಒಂದು ವರ್ಷದಲ್ಲಿ ಇವರು ನಾಲ್ಕು ಜಾನುವಾರನ್ನು ಕಳೆದುಕೊಂಡಿದ್ದಾರೆ. ಇದರೊಂದಿಗೆ ಗರ್ವಾಲೆ ಗ್ರಾಮದ ಬೆಳ್ಳಿಯಪ್ಪ, ಕುಶಾಲಪ್ಪ, ಹರಗ ಗ್ರಾಮದ ಸತೀಶ್, ಗಣಪತಿ ಅವರುಗಳಿಗೆ ಸೇರಿದ ಜಾನುವಾರುಗಳನ್ನು ಇದೇ ಹುಲಿ ಬಲಿ ಪಡೆದಿದೆ.
ಹುಲಿ ಧಾಳಿಯ ಬಗ್ಗೆ ಅರಣ್ಯ ಇಲಾಖೆಗೆ ಎಷ್ಟೇ ಮಾಹಿತಿ ನೀಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪರಿಹಾರವನ್ನು ವಿತರಿಸಿಲ್ಲ ಎಂದು ಗ್ರಾ.ಪಂ. ಉಪಾಧ್ಯಕ್ಷ ಪಳಂಗಪ್ಪ ದೂರಿದ್ದು, ಹುಲಿಯನ್ನು ಸೆರೆ ಹಿಡಿಯಬೇಕು. ತಪ್ಪಿದಲ್ಲಿ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸುವದಾಗಿ ಎಚ್ಚರಿಸಿದ್ದಾರೆ.