ಸುಂಟಿಕೊಪ್ಪ, ಆ. 30: ಸುಂಟಿಕೊಪ್ಪ ಪಟ್ಟಣದ ನಡುವೆ ರಾಷ್ಟ್ರೀಯ ಹೆದ್ದಾರಿಯು ಹಾದು ಹೋಗಿದ್ದು, ಹೆದ್ದಾರಿಯಲ್ಲಿ ವಾಹನಗಳು ಅತೀ ವೇಗವಾಗಿ ಚಲಿಸುತ್ತಿದ್ದು ಹೆದ್ದಾರಿಯಲ್ಲಿ ಜೀಬ್ರಾಕ್ರಾಸ್ ಅನ್ನು ಅಳವಡಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಬೋಯಿಕೇರಿ ಹಾಗೂ ಕೆದಕಲ್ ಬಳಿ ಆಗಿಂದಾಗ್ಗೆ ವಾಹನ ಅವಘಡಕ್ಕೀಡಾಗಿದ್ದನ್ನು ಮನಗಂಡು ಅಲ್ಲಿನ ರಸ್ತೆಗೆ ವಾಹನ ಸವಾರರಿಗೆ ರಸ್ತೆಯ ಸುರಕ್ಷತೆ ಬಗ್ಗೆ ತಿಳಿದುಕೊಳ್ಳಲು ರಸ್ತೆಗೆ ಜೀಬ್ರಾಕ್ರಾಸ್ ಗುರುತಿಸಿಲಾಗಿದೆ. ಅದೇ ರೀತಿ ಸುಂಟಿಕೊಪ್ಪ ಪಟ್ಟಣಕ್ಕೆ ಹೊಂದಿಕೊಂಡತೆ ವಿವಿಧ ಬಡಾವಣೆಗಳ ಸಂಪರ್ಕ ರಸ್ತೆಯು ಹೆದ್ದಾರಿಗೆ ಬಂದು ಸೇರುತ್ತಿದ್ದು, ಪಟ್ಟಣದಲ್ಲಿಯೂ ಜನ ದಟ್ಟಣೆ ಹೆಚ್ಚಾಗಿದ್ದು ಪಟ್ಟಣಕ್ಕಾಗಿ ಹೆದ್ದಾರಿಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತದೆ.

ಇಲ್ಲಿ ಅಗತ್ಯವಾಗಿ ಸಂಬಂಧಿಸಿದ ಇಲಾಖೆಯವರು ಜೀಬ್ರಾಕ್ರಾಸ್ ಸೂಚನಾ ಫಲಕ ರಸ್ತೆಗೆ ಅಳವಡಿಸಬೇಕು ಇದರಿಂದ ಜಿಲ್ಲೆ, ಹೊರಜಿಲ್ಲೆ ರಾಜ್ಯದಿಂದ ಬರುವ ವಾಹನಗಳು “ಜೀಬ್ರಾಕ್ರಾಸ್” ಅನ್ನು ಗಮನಿಸಿ ವೇಗವಾಗಿ ಬರುತ್ತಿರುವ ವಾಹನವನ್ನು ನಿಧಾನ ಗೊಳಿಸಲಿದ್ದಾರೆ.

ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿಯಿಂದ ಗದ್ದೆಹಳ್ಳದವರೆಗೆ ಪಟ್ಟಣದ ಒಳಗಿನ ರಸ್ತೆಯೂ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುತ್ತಿದ್ದು, ಜೀಬ್ರಾಕ್ರಾಸಿಂಗ್ ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆ ಬಳಿಯಿಂದ ಗದ್ದೆಹಳ್ಳದವರೆಗೆ ಸೂಕ್ತ ಸ್ಥಳವನ್ನು ಪರಿಗಣಿಸಿ ಅಳವಡಿಸ ಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಸುಂಟಿಕೊಪ್ಪ ಪಟ್ಟಣದಲ್ಲಿ ಶಾಲಾ-ಕಾಲೇಜುಗಳು ಅಧಿಕವಾಗಿದ್ದು, ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ನಿತ್ಯ ಸಾವಿರಾರು ವಿದ್ಯಾರ್ಥಿಗಳು ಹೆದ್ದಾರಿಯಲ್ಲಿಯೇ ಸಂಚರಿಸುತ್ತಿದ್ದು ಜಿಲ್ಲೆಗೆ ಪ್ರವಾಸಿಗರ ದಂಡೇ ಆಗಮಿಸುತ್ತಿದ್ದು ವಾಹನಗಳ ವೇಗವು ಅತಿಯಾಗಿದ್ದು ರಸ್ತೆಯನ್ನು ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಬೇಕಾದರೆ ಇನ್ನಿಲ್ಲದ ಪ್ರಯಾಸ ಪಡುವಂತಾಗಿದೆ.

ಶಾಲಾ ಮಕ್ಕಳನ್ನು ಸಂಚಾರ ನಿಯಂತ್ರಕ ಹೋಂಗಾರ್ಡ್‍ಗಳು ಒಂದು ಬದಿಯಿಂದ ಮತ್ತೊಂದು ಬದಿಗೆ ಸಾಗಹಾಕಬೇಕಾಗಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಗೆ ಜೀಬ್ರಾಕ್ರಾಸ್ ಅಳವಡಿಸುವ ಮೂಲಕ ವೇಗವಾಗಿ ಸಂಚರಿಸುವ ವಾಹನಗಳಿಂದ ಮುಂದಾಗುವ ಅನಾಹುತ ತಡೆಯಬೇಕೆಂದು ಸುಂಟಿಕೊಪ್ಪ ಚೇಂಬರ್ ಆಫ್ ಕಾಮರ್ಸ್ ಆಧ್ಯಕ್ಷ ಡಿ. ನರಸಿಂಹ ಆಗ್ರಹಿಸಿದ್ದಾರೆ.