ಬೆಂಗಳೂರು, ಜು. 28: ಡಿ.ವೈ.ಎಸ್.ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳಾದ ಹಿರಿಯ ಪೊಲೀಸ್ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಎ.ಎಂ.ಪ್ರಸಾದ್ ಇವರುಗಳು ಹೈಕೋರ್ಟ್‍ನಲ್ಲಿ ಸಲ್ಲಿಸಿದ್ದ ಕ್ರಿಮಿನಲ್ ಪಿಟಿಷನ್ ಇಂದು ವಜಾಗೊಂಡಿದೆ. ಇಬ್ಬರು ಅರ್ಜಿದಾರರು ತಮ್ಮ ಅರ್ಜಿಗಳನ್ನು ಹಿಂತೆಗೆದುಕೊಂಡಿದ್ದು ನ್ಯಾಯಾಧೀಶರಾದ ಆನಂದ್ ಭೈರಾರೆಡ್ಡಿ ಅವರು ಅರ್ಜಿಗಳನ್ನು ವಜಾಗೊಳಿಸಿ ಇಂದು ಆದೇಶವಿತ್ತ್ತರು. ಗಣಪತಿ ಅವರ ಪುತ್ರ ನೇಹಾಲ್ ಮಡಿಕೇರಿಯ ಪ್ರಧಾನ ಜೆ.ಎಂ.ಎಫ್. ಸಿ ನ್ಯಾಯಾಲಯದಲ್ಲಿ ಕೆ.ಜೆ. ಜಾರ್ಜ್, ಮೊಹಾಂತಿ ಹಾಗೂ ಪ್ರಸಾದ್ ಇವರುಗಳ ವಿರುದ್ಧ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ನ್ಯಾಯಾಲಯದ ನಿರ್ದೇಶನದಂತೆ ಈ ಮೂವರು ಪ್ರಭಾವಿಗಳ ವಿರುದ್ಧ ಮಡಿಕೇರಿ ನಗರ ಪೊಲೀಸರು ಎಫ್.ಐ. ಆರ್ ದಾಖಲಿಸಿದ್ದರು. ಈ ಎಫ್.ಐ. ಆರ್. ಅನ್ನು ವಜಾಗೊಳಿಸಲು ಕೋರಿ ಇಬ್ಬರು ಆರೋಪಿ ಅಧಿಕಾರಿಗಳು ತಾ. 19 ರಂದು ಹೈಕೋರ್ಟ್‍ನ ಮೊರೆ ಹೋಗಿದ್ದರು. ಆದರೆ, ಇದೀಗ ನ್ಯಾಯಾಲಯ ಅವರ ಅರ್ಜಿಗಳನ್ನು ವಜಾಗೊಳಿಸಿರುವದರಿಂದ ಆರೋಪಿತ ಅಧಿಕಾರಿಗಳಿಗೆ ಹಿನ್ನಡೆಯುಂಟಾಗಿದೆ.

ಅದಕ್ಕೂ ಮುನ್ನ ನ್ಯಾಯಾಧೀಶರು ಸರಕಾರಕ್ಕೆ ನಿರ್ದೇಶಿಸಿದ್ದಂತೆ ಸರಕಾರದ ಪರ ಅಡ್ವೋಕೇಟ್ ಜನರಲ್ ಮಧುಸೂದನ ನಾಯಕ್ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದರು. ತನಿಖೆಯು ಕ್ರಮಬದ್ಧವಾಗಿ ಮುಂದುವರಿ ಯಬೇಕಾದರೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಏಕ ತನಿಖೆಯ ಅಗತ್ಯದ ಬಗ್ಗೆ ನ್ಯಾಯಾಧೀಶರು ನೀಡಿದ್ದ ಸಲಹೆ ಆಧಾರದಲ್ಲಿ ಇಂದು ನ್ಯಾಯಾಲಯಕ್ಕೆ ಈ ಕುರಿತು ಮಧುಸೂದನ್ ನಾಯಕ್ ಸ್ಪಷ್ಟನೆಯಿತ್ತರು. ಇದೀಗ ಸಿ.ಐ.ಡಿಯೊಂದಿಗೆ ಮಡಿಕೇರಿ ಪೊಲೀಸರು ಕೂಡ ಪ್ರತ್ಯೇಕ ತನಿಖೆ ನಡೆಸುತ್ತಿರುವದರಿಂದ ಇದನ್ನು ಒಂದೇ ತನಿಖೆಯಾಗಿ ಪರಿವರ್ತಿಸಲಾಗುವದು. ಸಿ.ಐ.ಡಿ ಹಾಗೂ ಮಡಿಕೇರಿ ಅಧಿಕಾರಿಗಳ ತನಿಖೆಯನ್ನು ಒಂದುಗೂಡಿಸಿ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಯನ್ನು ಮುಂದುವರಿಸಲು ಬದ್ಧವಿರುವದಾಗಿ ಅಡ್ವೊಕೇಟ್ ಜನರಲ್ ಮಧುಸೂದನ್ ನಾಯಕ್ ಸರಕಾರದ ಪರ ನ್ಯಾಯಾಧೀಶರ ಮುಂದೆ ಖಚಿತಪಡಿಸಿದರು. ನೇಹಾಲ್ ಪರ ವಕೀಲ ಎಂ.ಡಿ.ನಾಣಯ್ಯ ಹಾಜರಿದ್ದರು.

ಸಿ.ಬಿ.ಐ ತನಿಖೆಗೆ ಪ್ರಯತ್ನ

ಈ ನಡುವೆ ಮೃತ ಎಂ.ಕೆ.ಗಣಪತಿ ಅವರ ಕುಟುಂಬ ಸದಸ್ಯರ ಪರವಾಗಿ ನ್ಯಾಯಕ್ಕಾಗಿ ಮೊರೆ ಹೋಗಲು ಅವರ ಪರ ವಕೀಲರು ಸಿ.ಬಿ.ಐ ತನಿಖೆ ಕೋರಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಲಿರುವದಾಗಿ “ಶಕ್ತಿ” ಗೆ ತಿಳಿದುಬಂದಿದೆ.