ಸೋಮವಾರಪೇಟೆ,ಸೆ.4: ಈ ಹಿಂದೆ ಏಳುಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಭೀಕರ ಬರಗಾಲ ಬಂದು ಊರಿನಲ್ಲಿದ್ದ ಬೃಹತ್ ಕೆರೆಯಲ್ಲೂ ಹನಿ ನೀರು ಸಿಗದಾದಾಗ, ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ಬಾಗಿನ ಅರ್ಪಿಸಲಾಯಿತು.

ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಇತಿಹಾಸ ಪ್ರಸಿದ್ಧ, ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನೆರವೇರಿತು.

ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸುವದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ.

ಸ್ವರ್ಣಗೌರಿ ಹಬ್ಬದ ದಿನವಾದ ಇಂದು ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಕ್ಷೇತ್ರದಲ್ಲಿರುವ ಶ್ರೀ ಹೊನ್ನಮ್ಮ ತಾಯಿ, ಬಸವೇಶ್ವರ ಗುಡಿಯಿರುವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬಾಗಿನ(ಮೊರದಲ್ಲಿ ಅರಸಿಣ, ಕುಂಕುಮ, ಬಿಚ್ಚೋಲೆ, ರವಿಕೆ ಕಣ, ಕನ್ನಡಿ, ಬಳೆ, ಹೂವು, ಫಲತಾಂಬೂಲ)ವನ್ನು ದೇವಾಲಯದ ಪಕ್ಕದಲ್ಲಿರುವ ಬಂಗಾರದ ಕಲ್ಲಿನ ಕಟ್ಟೆಯ ಮೇಲಿಟ್ಟು ಪೂಜೆ ಸಲ್ಲಿಸಿದ ಹೊನ್ನಮ್ಮ ಅವರ ಕುಟುಂಬಸ್ಥರು ನಂತರ ಕೆರೆಗೆ ಬಾಗಿನ ಅರ್ಪಿಸಿದರು.

ತದನಂತರ ಬಸವೇಶ್ವರ ಹಾಗೂ ಸ್ವರ್ಣಗೌರಿ ದೇವಾಲಯ ಸಮಿತಿ ಯವರೊಂದಿಗೆ ಶಾಸಕರುಗಳಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ವಿಧಾನ ಪರಿಷತ್ ಸದಸ್ಯರುಗಳಾದ ವೀಣಾ ಅಚ್ಚಯ್ಯ, ಸುನೀಲ್ ಸುಬ್ರಮಣಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯೆ ಕುಸುಮ ಅಶ್ವಥ್, ದೊಡ್ಡಮಳ್ತೆ ಗ್ರಾ.ಪಂ. ಅಧ್ಯಕ್ಷ ಸುಳಿಮಳ್ತೆ ದಿವಾಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಸೇರಿದಂತೆ ಪ್ರಮುಖರು ಬಾಗಿನವನ್ನು ಅರ್ಪಿಸಿದರು.