ಗುಡ್ಡೆಹೊಸೂರು, ಜೂ. 26: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದಲ್ಲಿ ಕತ್ತಲಾಯಿತು ಅಂದರೆ ಕಾಡಾನೆಗಳು ತೋಟಗಳಿಗೆ ನುಗ್ಗಿ ಕಾಫಿ, ಬಾಳೆ ತೆಂಗಿನ ಮರ ಮುಂತಾದ ಬೆಳೆಗಳನ್ನು ನಾಶ ಪಡಿಸುತ್ತಿವೆ ಎಂದು ಅಲ್ಲಿನ ರೈತರಾದ ಪರ್ಲಕೋಟಿ ಹರಿ, ಅಯ್ಯಂಡ್ರ ದಯಾನಂದ (ವಾಸು) ಉತ್ತಯ್ಯ, ಲೋಕನಾಥ್, ಎ.ಸಿ. ಸೋಮಯ್ಯ, ಆನಂದ, ಟಿ.ಇ. ಉತ್ತಯ್ಯ ತಿಳಿಸಿದ್ದಾರೆ.

ಹಲವು ದಿನಗಳಲ್ಲಿ ಆನೆಗಳು ರೈತರ ಮನೆಯ ಅಂಗಳದಲ್ಲಿ ಪ್ರತ್ಯಕ್ಷವಾಗುತ್ತಿವೆ. ಅಲ್ಲದೆ ತಮ್ಮ ಜೀವ ಉಳಿಸಿಕೊಂಡ ಪ್ರಸಂಗ ನಡೆದಿದೆ. ಇದೇ ರೀತಿ ಆನೆಗಳು ಧಾಳಿ ನಡೆಸುತ್ತಿದ್ದರೆ ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಮುಂಭಾಗ ಪ್ರತಿಭಟಿಸುವದಾಗಿ ರೈತರು ಎಚ್ಚರಿಸಿದ್ದಾರೆ.

ರೈತರು ಬೆಳೆದ ಫಸಲನ್ನು ತಿಂದು ನಷ್ಟ ಸಂಭವಿಸಿದರೆ ಸರಕಾರದ ವತಿಯಿಂದ ನೀಡುವ ಪರಿಹಾರ ಅಲ್ಪ ಪ್ರಮಾಣದ್ದಾಗಿದೆ. ಆ ಪರಿಹಾರ ಸಿಗಬೇಕಾದರೆ ಮುಂದಿನ ವರ್ಷ ಆನೆ ಧಾಳಿ ನಡೆಸಿದ ನಂತರ ಸಿಗುತ್ತದೆ ಎಂಬದಾಗಿ ರೈತರು ತಮ್ಮ ಅಸಮಾದಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖಾ ಅಧಿಕಾರಿಗಳು ಈ ಭಾಗದತ್ತ ಪರಿಶೀಲಿಸಿ ಸಮಸ್ಯೆ ಪರಿಹರಿಸುವಂತೆ ಹೊಸಪಟ್ಟಣ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಗಣೇಶ್ ಕೊಡೆಕ್ಕಲ್