ಕುಶಾಲನಗರ, ಸೆ. 12: ವಿದ್ಯಾರ್ಥಿಗಳು ಸರಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಂಡು ಉತ್ತಮ ಶಿಕ್ಷಣ ಪಡೆಯುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು. ಕುಶಾಲನಗರದ ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ನೂತನ ಕೊಠಡಿಗಳು ಹಾಗೂ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಸರಕಾರದ ಮೂಲಕ ಶಿಕ್ಷಣ ಸಂಸ್ಥೆಗಳನ್ನು ನೀಡಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹೆಚ್ಚಿನ ಅನುಕೂಲ ಕಲ್ಪಿಸಿಕೊಡಲಾಗುವದು ಎಂದು ಹೇಳಿದರು. ಪ್ರಾಸ್ತಾವಿಕ ನುಡಿಗಳಾಡಿದ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ವಿ.ಎನ್. ವಸಂತ ಕುಮಾರ್, ವಿದ್ಯಾರ್ಥಿಗಳು ತಮ್ಮ ಭವಿಷ್ಯಕ್ಕೆ ಅಡಿಪಾಯ ಕಲ್ಪಿಸುವ ಗುರುಗಳಿಗೆ ಸದಾ ಋಣಿಯಾಗಿರಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿಗೆ ನೆರವಾದ ದಾನಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಸದಸ್ಯರಾದ ಎಂ.ಎಸ್. ಶಿವಾನಂದ, ಮಾಜಿ ಸದಸ್ಯೆ ಕಮಲಾ ರಮೇಶ್, ಕಾಲೇಜು ಪ್ರಾಂಶುಪಾಲ ಸತೀಶ್ ಬಾಬು, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಬಲ್ಕಿಸ್ ಭಾನು, ಎಸ್‍ಡಿಎಂಸಿ ಸದಸ್ಯರಾದ ಎಂ.ಡಿ.ಕೃಷ್ಣಪ್ಪ, ಪಾಲಾಕ್ಷ ಪಾಲ್ಗೊಂಡಿದ್ದರು.